Covid-19: ದೇಶದಲ್ಲಿ ಪ್ರಕರಣಗಳ ಸಂಖ್ಯೆ 1,828 ಕ್ಕೆ ಏರಿಕೆ ; ಕರ್ನಾಟಕದಲ್ಲಿ ಹೈ ಅಲರ್ಟ್

Views: 6
ಕೇರಳದಲ್ಲಿ ಕೊರೊನಾ ಉಪತಳಿ ಪತ್ತೆಯಾಗ್ತಿದ್ದಂತೆ ರಾಜ್ಯದಲ್ಲಿ ಆತಂಕ ಶುರುವಾಗಿದೆ. ಅದರಲ್ಲೂ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ನಡುವೆ ಸೋಂಕು ಹೆಚ್ಚಾಗ್ತಿದ್ದಂತೆ ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಕೇರಳದಲ್ಲಿ ಈ ಹೊಸ ತಳಿ ಪತ್ತೆಯಾಗಿದ್ದು ಮಾತ್ರವಲ್ಲದೇ ಹೊಸದಾಗಿ ನೂರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು ಒಬ್ಬರು ಸಾವನ್ನಪ್ಪಿದ್ದಾರೆ. ಈ ಬೆನ್ನಲ್ಲೇ ರಾಜ್ಯ ಹಾಗೂ ದೇಶಾದ್ಯಂತ ಅಲರ್ಟ್ ಘೋಷಿಸಿದೆ.
ಕೊರೊನಾ ನಿಯಂತ್ರಣಕ್ಕೆ ಕೇಂದ್ರದಿಂದ ಮಾರ್ಗಸೂಚಿ ಪ್ರಕಟ
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ದೇಶದಲ್ಲಿ ಕಳೆದ 24 ಗಂಟೆಯಲ್ಲಿ 260 ಹೊಸ ಕೇಸ್ಗಳು ಪತ್ತೆಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,828 ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ಸುಧಾಂಶ್ ಪಂತ್ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ. ಅಗತ್ಯವಿರುವ ಸಾರ್ವಜನಿಕ ಆರೋಗ್ಯ ಸುರಕ್ಷತಾ ಕ್ರಮ ಜಾರಿಗೆ ಮತ್ತು ರೋಗದ ಹರಡುವಿಕೆ ಅಪಾಯ ಕಡಿಮೆ ಮಾಡಲು ಸೂಕ್ತ ವ್ಯವಸ್ಥೆ ಮಾಡಲು ಸಲಹೆ ನೀಡಲಾಗಿದೆ.
ಕೊರೊನಾ ಮಾರ್ಗಸೂಚಿಗಳೇನು?
— ಮುಂಬರುವ ಹಬ್ಬ ಹಾಗೂ ಜಾತ್ರೆಗಳ ಬಗ್ಗೆ ನಿಗಾ ವಹಿಸಬೇಕು
—-ಕೊರೊನಾ ಸೋಂಕು ಹೆಚ್ಚಳದ ಬಗ್ಗೆ ಜನಜಾಗೃತಿ ಮೂಡಿಸಬೇಕು
—ಚಿಕಿತ್ಸೆಗೆ ಬೇಕಾದ ಅಗತ್ಯ ಮೂಲ ಸೌಕರ್ಯ ಸಿದ್ಧಪಡಿಸಿಕೊಳ್ಳಬೇಕು
—ILI ಹಾಗೂ SARI ಪ್ರಕರಣಗಳ ಬಗ್ಗೆ ನಿಗಾ ವಹಿಸಬೇಕು
—ಪ್ರತಿ ಜಿಲ್ಲೆ, ನಗರಗಳಲ್ಲೂ RTPCR ಱಪಿಡ್ ಟೆಸ್ಟ್ ಮಾಡಬೇಕು
—ಪಾಸಿಟಿವ್ ಬಂದ್ರೆ ಜೀನೋಮಿಕ್ ಸೀಕ್ವೆನ್ಸಿಂಗ್ಗೆ ಸ್ಯಾಂಪಲ್ ಕಳಿಸಬೇಕು
—ಕೋವಿಡ್ ನಿಯಮಗಳನ್ನು ಸ್ಥಳೀಯವಾಗಿ ಜಾರಿ ಮಾಡಬೇಕೆಂದು ಸೂಚನೆ
ಕರ್ನಾಟಕದಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್!
ಕೇರಳದ ಮಹಿಳೆಯಲ್ಲಿ ಜೆಎನ್.1 ಉಪತಳಿ ಸೋಂಕು ಕಾಣಿಸಿಕೊಂಡು ರಾಜ್ಯಕ್ಕೂ ಕೊರೊನಾ ಭೂತ ಕಾಡುತ್ತಿದೆ. ರೂಪಾಂತರಿ ರಾಜ್ಯಕ್ಕೆ ಎಂಟ್ರಿ ಕೊಡದಂತೆ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೋವಿಡ್ ತಾಂತ್ರಿಕಾ ಸಲಹಾ ಸಮಿತಿ ಸಭೆ ಕರೆದಿದ್ದಾರೆ. ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ರವಿ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕೊರೊನಾ ಸೋಂಕು ನಿಯಂತ್ರಣದ ಬಗ್ಗೆ ಚರ್ಚೆ ನಡೆಯಲಿದೆ.
ಕೇರಳದಲ್ಲಿ ಕೊರೊನಾ.. ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ!
ಇನ್ನು ಕೊರೊನಾ ಉಪತಳಿ ಕಾಣಿಸಿಕೊಂಡಿರೋ ಕೇರಳದಿಂದ ರಾಜ್ಯಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಕೇರಳ ಜೊತೆ ಗಡಿ ಹಂಚಿಕೊಂಡ ರಾಜ್ಯದ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಬಳಿ ಚೆಕ್ಪೋಸ್ಟ್ನಲ್ಲಿ ತಪಾಸಣೆ ನಡೆಸಲು ಜಿಲ್ಲಾಡಳಿತ ಮುಂದಾಗಿದೆ. ಇತ್ತ ಚಿಕ್ಕಮಗಳೂರಿಗೆ ಕೇರಳದಿಂದ ಪ್ರವಾಸಿಗರು ಬರುವ ಕಾರಣ ಪ್ರವಾಸಿಗರ ನಿರ್ಬಂಧಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.