ಡೀಪ್‌ಫೇಕ್ ವಿಡಿಯೋ ವೈರಲ್: ರಶ್ಮಿಕಾ ಮಂದಣ್ಣ ನೋವು ಪ್ರತಿಕ್ರಿಯೆ

Views: 111
ನಟಿ ರಶ್ಮಿಕಾ ಮಂದಣ್ಣ ಅವರ ಒಂದು ಡೀಪ್‌ಫೇಕ್ ವಿಡಿಯೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಬೇರೆ ಯುವತಿಯ ದೇಹಕ್ಕೆ ರಶ್ಮಿಕಾ ಅವರ ಮುಖವನ್ನು ಎಡಿಟ್ ಮಾಡಿ ಹಾಕಲಾಗಿದೆ. ಈ ಸಂಗತಿ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಈ ವಿಡಿಯೋ ನೋಡಿದ ಎಷ್ಟೋ ಜನರು ಇದು ನಿಜವಾಗಿಯೂ ರಶ್ಮಿಕಾ ಮಂದಣ್ಣ ಅವರದ್ದೇ ವಿಡಿಯೋ ಎಂದು ನಂಬಿಕೊಂಡಿದ್ದಾರೆ. ಆದರೆ ಈ ಫೇಕ್ ವಿಡಿಯೋ ವಿರುದ್ಧ ಅನೇಕರು ಕಿಡಿಕಾರಿದ್ದಾರೆ. ತಂತ್ರಜ್ಞಾನದ ದುರ್ಬಳಕೆ ಮಾಡಿಕೊಂಡವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಈ ಮಧ್ಯೆ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಮತ್ತು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಇಬ್ಬರೂ ಅಪರಾಧಿಗಳ ವಿರುದ್ಧ ಕಾನೂನು ಕ್ರಮಕ್ಕೆ ಕರೆ ನೀಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ರಶ್ಮಿಕಾ, ”ಆನ್ಲೈನ್ನಲ್ಲಿ ನನ್ನ ಬಗ್ಗೆ ಡೀಪ್‌ಫೇಕ್ ವಿಡಿಯೋ ಹರಿದಾಡಿದ ಬಗ್ಗೆ ಮಾತನಾಡಲು ನನಗೆ ನಿಜಕ್ಕೂ ನೋವಾಗುತ್ತಿದೆ. ತಂತ್ರಜ್ಞಾನದ ದುರ್ಬಳಕೆಯಿಂದಾಗಿ ನನಗೆ ಮಾತ್ರವಲ್ಲದೇ ಎಲ್ಲರಿಗೂ ಭಯವಾಗುತ್ತಿದೆ” ಎಂದು ರಶ್ಮಿಕಾ ಮಂದಣ್ಣ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

”ಇಂದು ನನಗೆ ಬೆಂಬಲ ಮತ್ತು ರಕ್ಷಣೆ ನೀಡಿರುವ ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಓರ್ವ ಮಹಿಳೆಯಾಗಿ, ನಟಿಯಾಗಿ ನಾನು ಋಣಿ ಆಗಿದ್ದೇನೆ. ಆದರೆ ಇದು ಶಾಲೆ ಅಥವಾ ಕಾಲೇಜಿನಲ್ಲಿ ಇದ್ದಾಗ ಆಗಿದ್ದರೆ ಇದನ್ನು ನಾನು ಹೇಗೆ ಸರಿಪಡಿಸುತ್ತಿದ್ದೆನೋ ಗೊತ್ತಿಲ್ಲ. ಇಂಥ ಘಟನೆಗಳಿಂದ ನಮ್ಮಂತಹ ಹೆಚ್ಚಿನ ಜನರು ತೊಂದರೆಗೆ ಒಳಗಾಗುವುದಕ್ಕೂ ಮುನ್ನವೇ ಈ ಸಮಸ್ಯೆಯ ಬಗ್ಗೆ ನಾವು ಗಮನ ಹರಿಸಬೇಕಿದೆ” ಎಂದು ರಶ್ಮಿಕಾ ಮಂದಣ್ಣ ಅವರು ಬರೆದುಕೊಂಡಿದ್ದಾರೆ.
ಈ ಡೀಪ್‌ಫೇಕ್ ವೀಡಿಯೊವನ್ನು ನಟರು ಮತ್ತು ರಾಜಕಾರಣಿಗಳು ಟೀಕಿಸಿದ್ದಾರೆ, ಅವರು ಕಾನೂನು ಕ್ರಮಕ್ಕೆ ಕರೆ ನೀಡಿದರು.
ರಶ್ಮಿಕಾ ಅವರ ಈ ಡೀಪ್‌ಫೇಕ್ ವೀಡಿಯೊದ ಸತ್ಯಾಸತ್ಯತೆಯ ಕುರಿತು ಅಭಿಷೇಕ್ ಎಂಬುವವರು Xನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು, ಈ ಡೀಪ್‌ಫೇಕ್ ವಿಡಿಯೋ ರಚಿಸಲು ಬಳಸಿದ ಮೂಲ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ”ಭಾರತದಲ್ಲಿ ಡೀಪ್‌ಫೇಕ್ ವಿಡಿಯೋಗಳ ತೊಂದರೆ ಎದುರಿಸಲು ಕಾನೂನು ಮತ್ತು ನಿಯಂತ್ರಕ ಚೌಕಟ್ಟಿನ ತುರ್ತು ಅವಶ್ಯಕತೆಯಿದೆ. ನಟಿ ರಶ್ಮಿಕಾ ಮಂದಣ್ಣ ಅವರ ಈ ವೈರಲ್ ವೀಡಿಯೊವನ್ನು ನೀವು Instagram ನಲ್ಲಿ ನೋಡಿರಬಹುದು. ಆದರೆ ನಿರೀಕ್ಷಿಸಿ, ಇದು ಜರಾ ಪಟೇಲ್ (sic) ಅವರ ಡೀಪ್‌ಫೇಕ್ ವೀಡಿಯೊ” ಎಂದು ಅಭಿಷೇಕ್ ತಿಳಿಸಿದ್ದಾರೆ

ರಶ್ಮಿಕಾ ಅವರ ಮುಖ ಕಾಣಿಸಿಕೊಳ್ಳುವ ಮೊದಲು ಡೀಪ್‌ಫೇಕ್ ವೀಡಿಯೊದಲ್ಲಿ ಜರಾ ಅವರ ಮುಖವು ಒಂದು ಸೆಕೆಂಡ್ ಗೋಚರಿಸುತ್ತದೆ ಎಂದು ಅಭಿಷೇಕ್ ಗಮನಸೆಳೆದಿದ್ದಾರೆ. ”ಇದು ಡೀಪ್‌ಫೇಕ್ ವಿಡಿಯೋ ಎನ್ನುವುದು ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ತಿಳಿಯುವಷ್ಟು ಸ್ಪಷ್ಟವಾಗಿದೆ. ನೀವು ವೀಡಿಯೊವನ್ನು ಎಚ್ಚರಿಕೆಯಿಂದ ನೋಡಿದರೆ, ಮೊದಲ 0:01ಸೆಕೆಂಡ್ ನಲ್ಲಿ ಜರಾ ಅವರ ಮುಖ ಕಾಣಿಸಿ ನಂತರ ರಶ್ಮಿಕಾ ಮುಖ ಕಾಣಿಸಿಕೊಳ್ಳುತ್ತದೆ” ಎಂದು ಅವರು ಬರೆದುಕೊಂಡಿದ್ದಾರೆ.






