ತಮಿಳುನಾಡಿನಲ್ಲಿ ಧಾರಾಕಾರ ಮಳೆ, ಸಿಡಿಲಬ್ಬರಕ್ಕೆ ಇಬ್ಬರ ಸಾವು

Views: 0
ಚೆನ್ನೈ, ನೆರೆಯ ತಮಿಳುನಾಡಿನ ರಾಜಧಾನಿ ಚೆನ್ನೈ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆಗೆ ಇಬ್ಬರು ಸಾವನ್ನಪ್ಪಿದ್ದಾರೆ. ಸದ್ಯ 18 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಶ್ರೀಲಂಕಾ ಮತ್ತು ಪಕ್ಕದ ಪ್ರದೇಶಗಳಲ್ಲಿ ವಾತಾವರಣದ ಕಡಿಮೆ ಪರಿಚಲನೆ ಮತ್ತು ದಕ್ಷಿಣ ಬಂಗಾಳಕೊಲ್ಲಿಯಲ್ಲಿ ವಾತಾ ವರಣದ ಕಡಿಮೆ ಪರಿಚಲನೆಯಿಂದಾಗಿ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ನ ಅನೇಕ ಸ್ಥಳಗಳಲ್ಲಿ ನ.6 ರವರೆಗೆ ಗುಡುಗು ಮತ್ತು ಮಿಂಚು ಸಹಿತ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಸಂಸ್ಥೆ ತಿಳಿಸಿದೆ.ಕೊಯಮತ್ತೂರು, ತಿರುಪುರ್, ಥೇಣಿ, ದಿಂಡಿಗಲ್, ಮಧುರೈ, ವಿರುಧುನಗರ, ತೆಂಕಾಸಿ, ತೂತುಕುಡಿ, ತಿರುನೆಲ್ವೇಲಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.ಇಂದಿನಿಂದ ಥೇಣಿ ಮತ್ತು ದಿಂಡಿಗಲ್ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರಿ ಮಳೆ ಮತ್ತು ಕನ್ಯಾಕುಮಾರಿ, ತೆಂಕಾಸಿ, ತಿರುನೆಲ್ವೇಲಿ, ವಿರುಧುನಗರ, ಮಧುರೈ, ಶಿವಗಂಗೈ, ಪುದುಕೊಟ್ಟೈ, ತಂಜಾವೂರು, ಅರಿಯಲೂರು, ಪೆರಂಬಲೂರು, ನೀಲಗಿರಿ, ಕೊಯಮತ್ತೂರು, ತಿರುಪುರ್, ಈರೋಡ್, ಕರೂರ್ ಮತ್ತು ತಿರುಚಿರಾಪಳ್ಳಿ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ನಿರಂತರ ಭಾರೀ ಮಳೆಯಿಂದಾಗಿ ತಮಿಳುನಾಡಿನ ಚೆನ್ನೈ, ನೆಲ್ಲೈ, ಕನ್ಯಾಕುಮಾರ್, ಥೇಣಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಅದರಲ್ಲೂ ನೆಲ್ಲೈ, ತೆಂಕಶಿ, ಥೇಣಿ, ದಿಂಡಿಗಲ್, ಚೆನ್ನೈ, ಶಿವಗಂಗೈ, ಮಧುರೈ, ಕನ್ಯಾಕುಮಾರಿ ಮತ್ತು ಮೈಲಾಡುತುರೈನಲ್ಲಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ದಿಂಡಿಗಲ್ ಜಿಲ್ಲೆಯಲ್ಲಿ ಇಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ನಿನ್ನೆ ಜಾನುವಾರುಗಳಿಗೆ ಮೇವು ಕಟ್ ಮಾಡಲು ಹೊಲಕ್ಕೆ ಹೋದಾಗ ಧಾರಾಕಾರ ಮಳೆ ಸುರಿದಿದೆ. ಈ ವೇಳೆ ಅತ್ತೂರು ತಾಲೂಕಿನ ರೆಡಿಯಾರಚತ್ರಂ ದಡನಕೋಟೆ ನಿವಾಸಿ 27 ವರ್ಷದ ವಿಜಯಲಕ್ಷ್ಮಿ ಸಿಡಿಲಿನ ಅಬ್ಬರಕ್ಕೆ ಬಲಿಯಾಗಿದ್ದಾರೆ.
ನಟ್ಟಂ ಬಳಿಯ ಕೊಟ್ಟೈಯೂರು ಮೂಲದ 35ವರ್ಷದ ವೇಲ್ಮುರುಗನ್ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ನಿನ್ನೆ ಸಂಜೆ ಗುಡುಗು ಸಹಿತ ಮಳೆಯಾಗುತ್ತಿದ್ದ ವೇಳೆ ಹಸುವನ್ನು ಕಟ್ಟಲು ಹೋಗಿದ್ದರು. ಈ ವೇಳೆ ಸಿಡಿಲಿನ ಹೊಡೆತಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.






