ಆಸ್ಪತ್ರೆಯಲ್ಲಿ ತಾಯಿ ನಿದ್ದೆಯಲ್ಲಿದ್ದಾಗ ಆರು ದಿನದ ಗಂಡು ಶಿಶು ಅಪಹರಣ

Views: 0
ಕೋಲಾರ: ನಗರದ ಎಸ್ಎನ್ಆರ್ ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡ್ನಿಂದ ಗುರುವಾರ ಸಂಜೆ ಮೂವರು ಮಹಿಳೆಯರು ಆರು ದಿನಗಳ ಹಸುಳೆಯನ್ನು ಕದ್ದು ಪರಾರಿಯಾಗಿದ್ದಾರೆ. ಈ ಘಟನೆ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.
ಮಾಲೂರು ಪಟ್ಟಣದ ಪಟೇಲರ ಬೀದಿ ನಿವಾಸಿ ನಂದಿನಿ ಪೂವರಸನ್ ಏಳು ತಿಂಗಳಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹಾಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಉಳಿಸಿಕೊಳ್ಳಲಾಗಿತ್ತು.
ಮಧ್ಯಾಹ್ನ 3 ಗಂಟೆಯಿಂದ ಹೊಂಚು ಹಾಕಿದ್ದ ಕಳ್ಳರು, ನಂದಿನಿ ಮತ್ತು ಅವರ ತಾಯಿ ರಾಧಮ್ಮ ಅವರ ಚಲನವಲನ ಗಮನಿಸುತ್ತಿದ್ದರು. ರಾಧಮ್ಮ ವಾರ್ಡ್ನಿಂದ ಹೊರಗೆ ಹೋಗಿದ್ದರು, ಆ ಸಂದರ್ಭದಲ್ಲಿ ನಂದಿನಿ ಮಗುವನ್ನು ಪಕ್ಕದಲ್ಲಿ ಇಟ್ಟುಕೊಂಡು ಮಲಗಿದ್ದರು. ಈ ಮಧ್ಯೆ ಒಂದು ಬಾರಿ ಶೌಚಾಲಯಕ್ಕೆ ಹೋಗಿ ಬಂದು ಮತ್ತೆ ಮಲಗಿದ್ದರು. ಸ್ವಲ್ಪ ಹೊತ್ತಿಗೆ ಅಪರಿಚಿತ ಮಹಿಳೆಯರು ಕರ್ಟೇನ್ ಪಕ್ಕಕ್ಕೆ ಸರಿಸಿ ನೋಡಿದ್ದು, ಬೇರೆ ರೋಗಿಗಳ ಕಡೆಯವರು ಇರಬಹುದೆಂದು ನಂದಿನಿ ಮತ್ತೆ ನಿದ್ರೆ ಹೋಗಿದ್ದಾರೆ.
ಹೊರಗೆ ಹೋಗಿದ್ದ ರಾಧಮ್ಮ ವಾರ್ಡಿಗೆ ಬರುವಷ್ಟರಲ್ಲಿ ಮಗು ಇಲ್ಲದಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ಆಗ ಅಕ್ಕಪಕ್ಕದವರನ್ನು ಕೇಳಿದಾಗ ಯಾರೊ ಬಂದು ಎತ್ತುಕೊಂಡು ಹೋದರು ಎಂದು ಹೇಳಿದ ಕೂಡಲೇ ನಂದಿನಿ ಆತಂಕದಿಂದ ಕಿರುಚಾಡಿದ್ದಾರೆ. ಕೂಡಲೇ ವಾರ್ಡ್ಗೆ ಬಂದ ವೈದ್ಯಾಧಿಕಾರಿಗಳು ನಂದಿಯನ್ನು ಸಮಾಧಾನಪಡಿಸಿ, ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿದ್ದಾರೆ. 4 ಗಂಟೆ ಸುಮಾರಿಗೆ ಮೂವರು ಮಹಿಳೆಯರು ಮಗುವನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ.
ಕೋಲಾರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಕೂಡಲೇ ಕ್ರಮ ಕೈಗೊಂಡು ಮಗುವನ್ನು ಕೊಡಿಸುವಂತೆ ನಂದಿನಿ ಮತ್ತು ಕುಟುಂಬಸ್ಥರು ಮನವಿ ಮಾಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಎನ್.ವಿಜಯ್ ಕುಮಾರ್, ನಿವಾಸಿ ವೈದ್ಯಾಧಿಕಾರಿ ಡಾ.ಬಾಲಸುಂದರ್, ನಗರ ಠಾಣೆ ಪೊಲೀಸರು ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಿದರು.
ಗರ್ಭಿಣಿ ಆಗಿದ್ದ ನಂದಿನಿ ಏಳನೇ ತಿಂಗಳ ಆರೋಗ್ಯ ತಪಾಸಣೆಗಾಗಿ ಜಿಲ್ಲೆಯ ಮಾಲೂರು ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿನ ವೈದ್ಯರು ತಪಾಸಣೆ ನಡೆಸಿ ಆರೋಗ್ಯದಲ್ಲಿ ಏರುಪೇರಾಗುತ್ತಿದೆ ಎಂದು ಕೋಲಾರದ ಜಿಲ್ಲಾ ಎಸ್ಎನ್ಆರ್ ಆಸ್ಪತ್ರೆಗೆ ಹೋಗುವಂತೆ ಶಿಫಾರಸ್ಸು ಮಾಡಿದ ಮೇರೆಗೆ ಅ.21ರಂದು ಮಧ್ಯಾಹ್ನ 3 ಗಂಟೆಗೆ ಬಂದು ದಾಖಲಾಗಿದ್ದರು.
ಮೂವರು ಮಹಿಳೆಯರು ಬ್ಯಾಗ್ನಲ್ಲಿ ಮಗು ಕದ್ದೊಯ್ಯುತ್ತಿದ್ದಾರೆ ಎನ್ನಲಾದ ಸಿ.ಸಿ.ಟಿ.ವಿ ದೃಶ್ಯ
ಶಿಶು ಅಪಹರಣ ಸಂಬಂಧ ಪ್ರಕರಣ ದಾಖಲಾಗಿದೆ. ಮೂವರು ಮಹಿಳೆಯರ ಪತ್ತೆ ಕಾರ್ಯಾಚರಣೆ ಸಂಬಂಧ ಆಸ್ಪತ್ರೆಯಿಂದ ಎಲ್ಲಾ ಮಾಹಿತಿ ನೀಡಿದ್ದೇವೆ. ಮೊಬೈಲ್ ನೆಟ್ವರ್ಕ್ ಶೋಧಿಸುತ್ತಿದ್ದಾರೆ.






