ವೇಷ ಧರಿಸಿ ಭಿಕ್ಷೆ ಬೇಡುತ್ತಿರುವ ಯಕ್ಷಗಾನ ವೇಷಧಾರಿಯನ್ನು ತಡೆದ ಅಸಲಿ ಯಕ್ಷ ಕಲಾವಿದ

Views: 0
ಕರಾವಳಿಯ ಶ್ರೇಷ್ಠ ಜಾನಪದ ಕಲೆ ಯಕ್ಷಗಾನದ ನಕಲಿ ವೇಷ ಧರಿಸಿ ಬೀದಿ ಬೀದಿಯಲ್ಲಿ ತಿರುಗಿ ಭಿಕ್ಷೆ ಬೇಡುತ್ತಿರುವ ವೇಷದಾರಿಯನ್ನು ತಡೆದು ನಿಲ್ಲಿಸಿ ಆಕ್ಷೇಪಿಸಿದ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಅವರು ಆತನಿಗೆ ಬುದ್ಧಿಮಾತನ್ನು ಹೇಳಿ, ಸ್ಥಳದಲ್ಲಿಯೇ ವೇಷವನ್ನು ಕಳುಚಿಸಿದ ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ ರೋಡ್ ನಲ್ಲಿ ನಡೆದಿದೆ.
ದಸರಾ ಹಬ್ಬದ ಹೆಸರಿನಲ್ಲಿ ಕರಾವಳಿಯ ಯಕ್ಷಗಾನದ ಸಂಸ್ಕೃತಿಯ ಬಗ್ಗೆ ಏನನ್ನು ಅರಿಯದ ದಾವಣಗೆರೆಯ ವ್ಯಕ್ತಿಯೋರ್ವ ಯಕ್ಷಗಾನದ ವೇಷದಲ್ಲಿ ಸಾರ್ವಜನಿಕರಲ್ಲಿ ಭಿಕ್ಷೆ ಬೇಡಿ ಹಣ ಸಂಗ್ರಹ ಮಾಡುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿಯವರು ತಡೆದು ನಿಲ್ಲಿಸಿ ಯಕ್ಷಗಾನ ವೇಷಕ್ಕೆ ತನ್ನದೇ ಆದ ಗೌರವವಿದೆ. ಈ ರೀತಿಯ ವೇಷ ಧರಿಸಿ ಬಿಕ್ಷ ಬೇಡಿ ಯಕ್ಷಗಾನ ಕಲೆಯನ್ನು ಅವಮಾನಿಸುವುದು ಸರಿಯಲ್ಲ ತಕ್ಷಣವೇ ವೇಷ ಕಳಚುವಂತೆ ಒತ್ತಾಯಿಸಿ ವೇಷ ಕಳಚುವವರೆಗೆ ಸ್ಥಳದಲ್ಲಿಯೇ ಇದ್ದು ಪಟ್ಟು ಹಿಡಿದರು.
ಅಂತೂ ವೇಷ ಧರಿಸಿ ಭಿಕ್ಷೆ ಬೇಡುತ್ತಿರುವ ವ್ಯಕ್ತಿ ಹಿರಿಯ ಯಕ್ಷಗಾನ ಕಲಾವಿದರ ಪಟ್ಟಿಗೆ ಮಣಿದು ತನ್ನ ವೇಷವನ್ನು ಕಳಚಿ ಕ್ಷಮೆಯಾಚಿಸಿದ್ದಾರೆ.







