ಕರಾವಳಿ

ಕುಂದಾಪುರ: ಕುಸಿದು ಬಿದ್ದು ಬಾಲಕ ಸಾವು, ಅಕ್ಕನ ಸಾವಿನ ನೋವಲ್ಲಿರುವ ಪೋಷಕರಿಗೆ ತಮ್ಮನ ಸಾವು ಮತ್ತಷ್ಟು ಆಘಾತ!

Views: 0

ಉಡುಪಿ: ಶಾಲೆಗೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ವಿದ್ಯಾರ್ಥಿ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ತಲ್ಲೂರಿನಲ್ಲಿ ನಡೆದಿದೆ.

7ನೇ ತರಗತಿಯ ವಿದ್ಯಾರ್ಥಿ ಪೃಥ್ವಿರಾಜ್ ಶೆಟ್ಟಿ (13) ಮೃತ ದುರ್ದೈವಿ. ಕಳೆದ ವರ್ಷ ಪೃಥ್ವಿರಾಜ್​ ಅವರ ಅಕ್ಕ ಹೃದಯಾಘಾತದಿಂದ ಮೃತಪಟ್ಟಿದ್ದು, ಅಕ್ಕನ ಸಾವಿನ ನೋವಲ್ಲಿರುವ ಪೋಷಕರಿಗೆ ತಮ್ಮನ ಸಾವು ಮತ್ತಷ್ಟು ಆಘಾತ ಉಂಟು ಮಾಡಿದೆ.

ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿ ಅರುಣ್​ಕುಮಾರ ಶೆಟ್ಟಿ ಹಾಗೂ ಶಿಕ್ಷಕಿ ಭಾರತಿ ದಂಪತಿ ಪುತ್ರ ಪೃಥ್ವಿರಾಜ್ ಶನಿವಾರ ಬೆಳಗ್ಗೆ ಮನೆಯ ಬಳಿ ಶಾಲೆಯ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ಪೃಥ್ವಿರಾಜ್​ ಪೋಷಕರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಾಲಕನನ್ನು ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ಪೋಷಕರಿಗೆ ತಿಳಿಸಿದ್ದಾರೆ. ಹೃದಯಾಘಾತದಿಂದ ಬಾಲಕ ಪೃಥ್ವಿರಾಜ್​ ಮೃತಪಟ್ಟಿರಬಹುದು ಎಂದು ವೃದ್ಯರು ಶಂಕಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಪೃಥ್ವಿರಾಜ್ ಸಾವಿಗೆ ಕಾರಣ ತಿಳಿಯಲಿದೆ.

ಅರುಣ್​ಕುಮಾರ ಶೆಟ್ಟಿ ಹಾಗೂ ಭಾರತಿ ಶೆಟ್ಟಿ ದಂಪತಿಗೆ ಓರ್ವ ಪುತ್ರಿ ಹಾಗೂ ಪುತ್ರ ಇದ್ದು ಮಗಳು ಕಳೆದ ವರ್ಷ ಹೃದಯಾಘಾತದಿಂದ ಮೃತಪಟ್ಟಿದ್ದು ಇದು ಅವರ ಮನೆಯಲ್ಲಿ ಸಂಭವಿಸಿದ ಎರಡನೇ ದುರಂತ. ಕಳೆದ ವರ್ಷ ಅ.27 ರಂದು 8ನೇ ತರಗತಿಯಲ್ಲಿ ಓದುತ್ತಿದ್ದ ಪುತ್ರಿ ಅನುಶ್ರೀ (14) ಮನೆಯಲ್ಲಿ ಓದುತ್ತಿರುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದರು.

ಅ.20 ಪೃಥ್ವಿರಾಜ್ ಶೆಟ್ಟಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಕಳೆದ ವರ್ಷ ತಮ್ಮನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದ ಅಕ್ಕ ಅನುಶ್ರೀ, ಸಂಭ್ರಮ ಮುಗಿದ ಒಂದು ವಾರದ ಒಳಗೆ ಇಹಲೋಕ ತ್ಯಜಿಸಿದ್ದರು. ಅಕ್ಕನ ನೆನಪಿನಲ್ಲೇ ದುಖಃದಿಂದ ಹುಟ್ಟುಹಬ್ಬ ಆಚರಿಸಿದ್ದ ಪ್ರಥ್ವಿ, ಮರುದಿನವೇ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿರುವುದು ದುರದೃಷ್ಟಕರ ಸಂಗತಿಯಾಗಿದೆ.

Related Articles

Back to top button