ಕರಾವಳಿ ಮೂಲದರಿಗೆ ಸದ್ಯ ಸಮಸ್ಯೆ ಇಲ್ಲದಿದ್ದರೂ ಮುಂದೇನಾಗಬಹುದುಎಂಬ ಆತಂಕ : ಉಡುಪಿ ಜಿಲ್ಲೆಯ ನಾಗರಿಕರ ಮಾಹಿತಿಗಾಗಿ ಸಂಪರ್ಕಿಸಿ

Views: 0
ಕರಾವಳಿ ಮೂಲದರಿಗೆ ಸದ್ಯ ಸಮಸ್ಯೆ ಇಲ್ಲದಿದ್ದರೂ ಮುಂದೇನಾಗಬಹುದುಎಂಬ ಆತಂಕ : ಉಡುಪಿ ಜಿಲ್ಲೆಯ ನಾಗರಿಕರ ಮಾಹಿತಿಗಾಗಿ ಸಂಪರ್ಕಿಸಿ
ಉಡುಪಿ:ಇಸ್ರೇಲ್ ನಲ್ಲಿರುವ ಉಡುಪಿಯ ನಾಗರಕರ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾಡಳಿತ ಕಂಟ್ರೋಲ್ ರೂಮ್ ಆರಂಭಿಸಿದ್ದು ಈಗಾಗಲೇ ವಿವಿಧ ಭಾಗಗಳಿಂದ 40 ಮಂದಿ ಮಾಹಿತಿ ನೀಡಿದ್ದಾರೆ. ಅವರ ಪೋಷಕರು ನಿರಂತರ ಸಂಪರ್ಕದಲ್ಲಿದ್ದಾರೆ. ಇದುವರೆಗೂ ಜಿಲ್ಲೆಯ ಯಾರೂ ಕೂಡ ಸಂಕಷ್ಟದಲ್ಲಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ತಿಳಿಸಿದ್ದಾರೆ.
ಜಿಲ್ಲೆಯ ಯಾರಾದರೂ ಇಸ್ರೇಲ್ ನಲ್ಲಿದ್ದರೆ ಅವರ ಮಾಹಿತಿಯನ್ನು ಕಂಟ್ರೋಲ್ ರೂಮ್ ಸಂಖ್ಯೆ- 1077 ಹಾಗೂ 0820 -2574802 ಅಥವಾ ಸರಕಾರದ ತುರ್ತು ಸಂಖ್ಯೆ 080- 22340676, 080-22253707 ಗೆ ಮಾಹಿತಿ ನೀಡಬಹುದು ಎಂದಿದ್ದಾರೆ.ಉಡುಪಿಯವರು ಇಸ್ರೇಲ್ ನಲ್ಲಿ ಸದ್ಯಕ್ಕೆ 40 ಮಂದಿಯಷ್ಟೇ ಮಾಹಿತಿ ನೀಡಿದ್ದಾರೆ ಎಂದರು.
ಇಸ್ರೇಲ್ ನಲ್ಲಿ ಕಾಪು ತಾಲೂಕಿನ 16 ಮಂದಿ ಇರುವ ಬಗ್ಗೆ ಮಾಹಿತಿ ದೊರಕಿದ್ದು ಸದ್ಯಕ್ಕೆ ಎಲ್ಲರೂ ಸುರಕ್ಷಿತವಾಗಿದ್ದಾರೆ. ಉದ್ಯೋಗದಲ್ಲಿರುವವರು ಮನೆಯವರ ಜೊತೆಗೆ ಪೊಲೀಸರು ಸಂಪರ್ಕ ಸಾಧಿಸಿ ಅವರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಪ್ರಸ್ತುತ ಎಲ್ಲರೂ ಕ್ಷೇಮವಾಗಿದ್ದಾರೆ ಎಂಬ ಮಾಹಿತಿ ದೊರಕಿದೆ.
ಕರ್ನಾಟಕ ಕರಾವಳಿ ಮೂಲದವರು ಸದ್ಯ ಸಮಸ್ಯೆ ಇಲ್ಲದಿದ್ದರೂ ಮುಂದೇನಾಗಬಹುದು ಎನ್ನುವ ಆತಂಕದಲ್ಲಿದ್ದಾರೆ. ಮುಖ್ಯವಾಗಿ ದಕ್ಷಿಣ ಇಸ್ರೇಲ್ ನ ಪಟ್ಟಣಗಳಲ್ಲಿ ಕೊಂಚ ಹೆಚ್ಚು ಭೀತಿ ಇದೆ. ಮಧ್ಯಭಾಗ ಪರವಾಗಿಲ್ಲ ದಕ್ಷಿಣ ಭಾಗದಲ್ಲಿನ ನಗರಗಳಲ್ಲಿ ಆಗಿಂದಾಗೆ ಬಾಂಬ್ ಕ್ಷಿಪಣಿ ದಾಳಿ ನಡೆಯುತ್ತಿದೆ.ಕಳೆದ 14 ವರ್ಷದಲ್ಲಿ ಇಷ್ಟು ಭೀಕರ ಧಾಳಿಯನ್ನು ನಾವು ಇಸ್ರೇಲ್ ನಲ್ಲಿ ನೋಡಿಲ್ಲ ಎಂದು ಹೇಳಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಿಂದ ಇಸ್ರೇಲ್ ಗೆ ತೆರಳಿರುವವರ ಕುಟುಂಬದವರು ಮಾಹಿತಿ ನೀಡುವಂತೆ ಸಹಾಯವಾಣಿ ಸಂಖ್ಯೆ ಕೊಡಲಾಗಿತ್ತು ಇದುವರೆಗೆ 58 ಮಂದಿ ಸಂಪರ್ಕ ಮಾಡಿದ್ದಾರೆ. ಅವರು ತಮ್ಮ ಆತಂಕವನ್ನು ತೋಡಿಕೊಂಡಿದ್ದು ಆದಷ್ಟು ಬೇಗನೆ ಇಸ್ರೇಲ್ ನಿಂದ ಕರೆದು ತರುವಂತೆ ಹೇಳಿದ್ದಾರೆ. ನಾವು ಸಂಗ್ರಹಿಸಿದ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದೇವೆ ಅಲ್ಲಿಂದ ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಆನಂದ್ ಕೆ ತಿಳಿಸಿದ್ದಾರೆ.
ಶಿರ್ವ ಪರಿಸರದ ಮೂಡುಬೆಳ್ಳೆ, ಶಂಕಪುರ ಸಹಿತ 50ಕ್ಕೂ ಹೆಚ್ಚು ಮಂದಿ ಎಲ್ಲರೂ ಸುರಕ್ಷಿತ ರಾಗಿದ್ದಾರೆ ಎಂದು ಅಲ್ಲಿನ ನಿವಾಸಿಯೊಬ್ಬರು ಹೇಳಿದ್ದಾರೆ.