ಶಿಕ್ಷಣ

ಮಂಗಳೂರು:ಮೆಡಿಕಲ್ ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳನ್ನು ಅಕ್ರಮವಾಗಿ ಕೂಡಿಹಾಕಿ ಸರಣಿ ರ‍್ಯಾಗಿಂಗ್!

Views: 0

ಕನ್ನಡ ಕರಾವಳಿ ಸುದ್ದಿ: ಮಂಗಳೂರು ಹೊರವಲಯದ ದೇರಳಕಟ್ಟೆಯಲ್ಲಿರುವ ಕಣಚೂರು ಮೆಡಿಕಲ್ ಕಾಲೇಜು ಕ್ಯಾಂಪಸ್‌ನಲ್ಲಿ ಜ್ಯೂನಿಯರ್ ವಿದ್ಯಾರ್ಥಿಗಳ ಮೇಲೆ ಸೀನಿಯರ್ ವಿದ್ಯಾರ್ಥಿಗಳು ಸರಣಿ ರ‍್ಯಾಗಿಂಗ್ ನಡೆಸಿ, ಅಕ್ರಮವಾಗಿ ಕೂಡಿಹಾಕಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿರುವ ಅಮಾನವೀಯ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ವಿದ್ಯಾರ್ಥಿ ನೀಡಿದ ದೂರಿನ ಮೇರೆಗೆ ಸೀನಿಯರ್ ವಿದ್ಯಾರ್ಥಿಗಳಾದ ಅಶಬ್, ಅಸ್ಫಕ್ ಸೇರಿದಂತೆ ಇತರರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಪ್ರಕಟಣೆ ತಿಳಿಸಿದೆ.

ಕೇರಳದ ಕೊಲ್ಲಂ ಜಿಲ್ಲೆಯ ಕೊಟ್ಟಾರಕ್ಕರ್ ಮೂಲದ ಅಕ್ಷಯ್ ವಿ.ಎಸ್. (21) ಎಂಬ ವಿದ್ಯಾರ್ಥಿಯು ಕಣಚೂರು ಕಾಲೇಜಿನಲ್ಲಿ ಬಿಎಸ್ಸಿ ಇನ್ ನ್ಯೂರೋ ಸೈನ್ಸ್ ಟೆಕ್ನಾಲಜಿ ಕೋರ್ಸ್‌ನ ಪ್ರಥಮ ವರ್ಷದ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರ ಮೇಲೆ ಅದೇ ಕಾಲೇಜಿನಲ್ಲಿ ಸೀನಿಯರ್ ವಿದ್ಯಾರ್ಥಿಗಳಾಗಿರುವ ಅಶಬ್ ಹಾಗೂ ಅಸ್ಫಕ್ ಎಂಬವರು ನಿರಂತರವಾಗಿ ದಬ್ಬಾಳಿಕೆ ನಡೆಸಿ ರ‍್ಯಾಗಿಂಗ್ ಮಾಡಿರುವ ಆರೋಪಿಸಲಾಗಿದೆ.

ಅಕ್ಟೋಬರ್ 2ರಂದು ಬೆದರಿಕೆ: ಪಿರ್ಯಾದುದಾರ ಅಕ್ಷಯ್ ಅವರು ಅಲೀಸ್ ಕಿಚನ್ ರೆಸ್ಟೋರೆಂಟ್ ಬಳಿ ನಿಂತಿದ್ದಾಗ ಬಂದ ಆರೋಪಿ ಅಸ್ಫಕ್, ಕ್ಯಾಂಪಸ್ ಹೊರಗಡೆ ಯೂನಿಫಾರ್ಮ್ ಇಲ್ಲದೇ ಸುತ್ತಾಡಿದರೆ ಕೈಕಾಲು ಮುರಿದು ಕಾಲೇಜಿಗೆ ದೂರು ನೀಡುತ್ತೇವೆ ಎಂದು ಅವಾಚ್ಯವಾಗಿ ನಿಂದಿಸಿ, ರ‍್ಯಾಗಿಂಗ್ ಮಾಡಿ ಜೀವ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಕ್ಟೋಬರ್ 15ರಂದು ರೂಮಿನಲ್ಲಿ ಕೂಡಿಹಾಕಿ ವಿಡಿಯೋ ಚಿತ್ರೀಕರಣ ಆರೋಪ: ಮಧ್ಯಾಹ್ನ ಅಕ್ಷಯ್ ಹಾಗೂ ಅವರ ಸ್ನೇಹಿತರಾದ ಝಾಹಿದ್, ಶಹಜಾದ್, ಹುಸೈರ್, ರೋವನ್, ಅಲ್ಫಾಝ್ ಮತ್ತು ಆದಿರ್ ಊಟಕ್ಕೆ ತೆರಳುತ್ತಿದ್ದಾಗ, ಆರೋಪಿ ಅಶಬ್ ಪದೇ ಪದೆ ಕರೆ ಮಾಡಿ ಕ್ಲಾಕ್ ಟವರ್ ಬಳಿ ಕರೆಸಿಕೊಂಡಿದ್ದಾನೆ. ಬಳಿಕ ಎಲ್ಲರನ್ನೂ ಸಮೀಪದ ‘ಶ್ರೀ ದೇವಿ ಪ್ರಸಾದ್’ ಹೋಟೆಲ್ ಕೋಣೆಗೆ ಕರೆದೊಯ್ದು, ಅಕ್ರಮವಾಗಿ ಕೂಡಿಹಾಕಿದ್ದಾನೆ. ಹಾಡು ಹಾಡದಿದ್ದರೆ ಕೋಣೆಯಿಂದ ಹೊರಗೆ ಬಿಡುವುದಿಲ್ಲ ಎಂದು ಬೆದರಿಸಿ, ಬಲವಂತವಾಗಿ ಹಾಡಿಸಿ ತನ್ನ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಇತರರಿಗೆ ಶೇರ್ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಕ್ಟೋಬರ್ 22ರಂದು ಅಮಾನವೀಯ ವಿಕೃತಿ: ಜ್ಯೂನಿಯರ್ ವಿದ್ಯಾರ್ಥಿ ಅಲ್ಫಾಜ್‌ನನ್ನು ಬೈಕ್‌ನಲ್ಲಿ ಬಲವಂತವಾಗಿ ಕರೆದೊಯ್ದ ಆರೋಪಿ ಅಶಬ್ ಹಾಗೂ ಇನ್ನೊಬ್ಬ, ಝಾಹಿದ್‌ನ ರೂಮಿನಲ್ಲಿ ಕೂಡಿಹಾಕಿದ್ದಾರೆ. ಅಲ್ಲಿ ಅಲ್ಫಾಜ್ ಕೈಗೆ ಬೆಂಕಿಪೊಟ್ಟಣ ನೀಡಿ ಇಡೀ ಕೋಣೆಯನ್ನು ಅಳೆಯುವಂತೆ ಹಾಗೂ ಕೋಳಿ ಮೊಟ್ಟೆ ಇಡುವಂತೆ ಮಾಡಿ ಅಮಾನವೀಯವಾಗಿ ರ‍್ಯಾಗಿಂಗ್ ಮಾಡಿದ್ದಾರೆ. ಇಂದಿಗೆ ನಿನ್ನ ಸರದಿ ಮುಗಿಯಿತು, ಇನ್ನು ದಿನಕ್ಕೊಬ್ಬರಂತೆ ರ‍್ಯಾಗಿಂಗ್ ಮಾಡುತ್ತೇವೆ. ಈ ವಿಷಯವನ್ನು ಯಾರಿಗಾದರೂ ಬಾಯ್ಬಿಟ್ಟರೆ ಕೈಕಾಲು ಮುರಿದು ಕಬರಸ್ಥಾನಕ್ಕೆ ಕಳುಹಿಸುತ್ತೇವೆ ಎಂದು ಬೈಗುಳಗಳೊಂದಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಉಳ್ಳಾಲ ಠಾಣೆಯಲ್ಲಿ ಎಫ್‌ಐಆರ್ ದಾಖಲು:ಸೀನಿಯರ್‌ಗಳ ಈ ನಿರಂತರ ರ‍್ಯಾಗಿಂಗ್ ಮತ್ತು ಕೊಲೆ ಬೆದರಿಕೆಯಿಂದ ತೀವ್ರ ಭಯಭೀತರಾದ ವಿದ್ಯಾರ್ಥಿಗಳು ಇದೀಗ ಧೈರ್ಯ ಮಾಡಿ ಪೊಲೀಸರ ಮೊರೆ ಹೋಗಿದ್ದಾರೆ. ಸಂತ್ರಸ್ತ ವಿದ್ಯಾರ್ಥಿ ಅಕ್ಷಯ್ ನೀಡಿದ ದೂರಿನ ಆಧಾರದ ಮೇಲೆ ಉಳ್ಳಾಲ ಠಾಣಾ ಪೊಲೀಸರು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Related Articles

Back to top button
error: Content is protected !!