ಇತರೆ

ಅಮಾಸೆಬೈಲು: ಸ್ನೇಹಿತರನ್ನು ಕರೆತಂದು ಪಾರ್ಟಿ ಮಾಡುವುದು ಸರಿಯಲ್ಲ ಎಂದು ಪ್ರಶ್ನಿಸಿದಕ್ಕೆ ತಾಯಿಯ ಮೇಲೆ ಮಗನಿಂದ ಹಲ್ಲೆ 

Views: 118

ಕನ್ನಡ ಕರಾವಳಿ ಸುದ್ದಿ: ಮನೆಯಲ್ಲಿ ಮದ್ಯದ ಪಾರ್ಟಿ ಮಾಡುತ್ತಿದ್ದುದನ್ನು ಪ್ರಶ್ನಿಸಿದ ತಾಯಿಗೆ ಮಗನೇ ಪಿವಿಸಿ ಪೈಪ್‌ನಿಂದ ಹಲ್ಲೆ ನಡೆಸಿದ ಘಟನೆ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶೇಡಿಮನೆ ಗ್ರಾಮದ 45 ವರ್ಷದ ಸರಸ್ವತಿ ಅವರು ನೀಡಿದ ದೂರಿನಂತೆ, ಅಕ್ಟೋಬರ್ 1ರಂದು ರಾತ್ರಿ ಸುಮಾರು 9:45ಕ್ಕೆ ಅವರ ಮಗ ಶರತ್ ನಾಯ್ಕ್ ತನ್ನ ಸ್ನೇಹಿತರಾದ ಅವಿಚರಣ ಹಾಗೂ ನಾಗರಾಜ ಎಂಬವರನ್ನು ಮನೆಗೆ ಕರೆತಂದು ಪಕ್ಕದ ಶೆಡ್‌ನಲ್ಲಿ ಮದ್ಯದ ಪಾರ್ಟಿ ಮಾಡುತ್ತಿದ್ದ ಎನ್ನಲಾಗಿದೆ.

ಮನೆಯಲ್ಲೇ ಹೆಣ್ಣುಮಕ್ಕಳಿರುವುದರಿಂದ ಸ್ನೇಹಿತರನ್ನು ಕರೆತಂದು ಪಾರ್ಟಿ ಮಾಡುವುದು ಸರಿಯಲ್ಲ ಎಂದು ಸರಸ್ವತಿ ಪ್ರಶ್ನಿಸಿದಾಗ, ಶರತ್ ಗಲಾಟೆ ಮಾಡಿ ಪಿವಿಸಿ ಪೈಪ್‌ನ ತುಂಡಿನಿಂದ ಅವರ ಮುಖಕ್ಕೆ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆ ವಿಚಾರ ತಿಳಿದು ಸರಸ್ವತಿ ಅವರ ಅಳಿಯ ರಾಘವೇಂದ್ರ ಹಾಗೂ ಅವರ ಸ್ನೇಹಿತ ಸತೀಶ್ ಶೆಟ್ಟಿ ವಿಚಾರಿಸಲು ಮನೆಗೆ ಬರುತ್ತಿದ್ದ ವೇಳೆ, ಆರೋಪಿಗಳು ಅವರನ್ನು ಅಂಗಳದಲ್ಲೇ ತಡೆದು ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.

ಈ ವೇಳೆ ಅವಿಚರಣ ರೀಪಿನ ತುಂಡಿನಿಂದ ಸತೀಶ್ ಶೆಟ್ಟಿಯವರ ಕೈಗೆ ಹೊಡೆದಿದ್ದು, ಶರತ್ ಮತ್ತು ನಾಗರಾಜ ಅವಾಚ್ಯವಾಗಿ ಬೈದು ರಾಘವೇಂದ್ರ ಹಾಗೂ ಸತೀಶ್ ಅವರಿಗೆ ಕೈಯಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಕುರಿತು ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

Back to top button
error: Content is protected !!