ಮಾರಣಕಟ್ಟೆ ಬಳಿ ದನವನ್ನು ಬಲವಂತವಾಗಿ ಎಳೆದು ಕಾರಿಗೆ ತುಂಬಿಸಿ ಪರಾರಿಯಾದ ಆರೋಪಿ ಸೆರೆ
Views: 132
ಕನ್ನಡ ಕರಾವಳಿ ಸುದ್ದಿ: ಮಾರಣಕಟ್ಟೆ ಮುಖ್ಯ ರಸ್ತೆ ಬಳಿ ದನವನ್ನು ಬಲವಂತವಾಗಿ ಎಳೆದು ಕಾರಿಗೆ ತುಂಬಿಸಿ ಪರಾರಿಯಾದ ಪ್ರಮುಖ ಆರೋಪಿಯನ್ನು ಕೊಲ್ಲೂರು ಪೋಲಿಸರು ಬಂಧಿಸಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸೆ.29 ರಂದು ರಾತ್ರಿ 1.30ರ ವೇಳೆಗೆ ಚಿತ್ತೂರು ಬಳಿ ಕಾರಿನಲ್ಲಿ ಬಂದ ಅಪರಿಚಿತರು ದನವನ್ನು ತುಂಬಿಸಿಕೊಂಡು ಹೋದ ಬಗ್ಗೆ ಸಿ.ಸಿ.ಕೆಮೆರಾ ದೃಶ್ಯಾವಳಿ ವೈರಲ್ ಆಗಿತ್ತು. ಸ್ಥಳೀಯರು ನೀಡಿದ ದೂರಿನಂತೆ ಕೊಲ್ಲೂರು ಪೋಲಿಸರು ಪ್ರಕರಣ ದಾಖಲಿಸಿ, ಆರೋಪಿಯ ಪತ್ತೆ ಕಾರ್ಯದಲ್ಲಿ ತೊಡಗಿಸಿಕೊಂಡರು.
ಕುಂದಾಪುರ ಡಿ.ವೈ.ಎಸ್.ಪಿ ಎಚ್.ಡಿ.ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್, ಕೊಲ್ಲೂರು ಎಸ್.ಐ. ವಿನಯ ಎಂ. ಕೊರ್ಲಹಳ್ಳಿ ಹಾಗೂ ಠಾಣಾ ಸಿಬಂದಿಗಳಾದ ನಾಗೇಂದ್ರ, ರುದ್ರೇಶ, ನವೀನ್, ವಿಲಾಸ ರಾಠೋಡ್, ನಾಗರಾಜ, ಅವರು ಆರೋಪಿ ಗುಲ್ವಾಡಿ ನಿವಾಸಿ ಮೊಹಮ್ಮದ್ ಸಿನಾಲ್ (20) ಎಂಬಾತನನ್ನು ಬಂಧಿಸಿದರು. ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಆರೋಪಿಗಳ ಮಾಹಿತಿ ಲಭಿಸಿದ್ದು ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ. ಆರೋಪಿ ಮೊಹಮ್ಮದ್ ಸಿನಾಲ್ ಕುಂದಾಪುರ ಉಪವಿಭಾಗದ ಇತರ ಠಾಣೆಗಳಲ್ಲಿ, 5 ದನಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.






