ಟಿವಿ ರಿಚಾರ್ಜ್ ಮಾಡುವ ಹೆಸರಿನಲ್ಲಿ ಲಿಂಕ್ ಕಳುಹಿಸಿ ಕುಂದಾಪುರದ ವ್ಯಕ್ತಿಗೆ ಲಕ್ಷಾಂತರ ರೂ. ವಂಚಿಸಿದ ಸೈಬರ್ ವಂಚಕರು
Views: 61
ಕನ್ನಡ ಕರಾವಳಿ ಸುದ್ದಿ: ಟಿವಿ ರಿಚಾರ್ಜ್ ಮಾಡುವ ಹೆಸರಿನಲ್ಲಿ ಸೈಬರ್ ಕಳ್ಳರು ಲಿಂಕ್ ಕಳುಹಿಸಿ, ಕುಂದಾಪುರದ ಚಿಕ್ಕನ್ ಸಾಲ್ ರಸ್ತೆಯ ವಿವೇಕಾನಂದ ಕೋಟೆಗಾರ್ (61) ಹಾಗೂ ಅವರ ಪತ್ನಿಯ ಬ್ಯಾಂಕ್ ಖಾತೆಯಲ್ಲಿದ್ದ 1.88 ಲಕ್ಷ ರೂ. ಹಣವನ್ನು ಸೈಬರ್ ವಂಚಕರು ಮೋಸ ಮಾಡಿ ಲಪಟಾಯಿಸಿದ ಘಟನೆ ಬೆಳಕಿಗೆ ಬಂದಿದೆ.
ವಿವೇಕಾನಂದ ಅವರು ಸೆ.12ರ ಬೆಳಗ್ಗೆ ಮೊಬೈಲ್ ನಲ್ಲಿ ಟಾಟಾ ಸ್ಕೈ ವೆಬ್‌ಸೈಟ್ ಗೆ ಹೋಗಿ ಹುಡುಕಿದಾಗ 06009616528 ನಂಬರ್ ಇದ್ದು, ಅದಕ್ಕೆ ಕರೆ ಮಾಡಿದ್ದಾರೆ. ಆಗ ಆ ಆರೋಪಿಯು ಟಾಟಾ ಸ್ಕೈ ಕರೆನ್ಸಿ ದರ ಕಡಿಮೆಯಿದ್ದು, ರಿಚಾರ್ಜ್ ಮಾಡಿಸಿ ಎಂದು ಹೇಳಿದ್ದ. ಅದರಂತೆ ಇವರು ಪತ್ನಿ ಬಳಿ ರಿಚಾರ್ಜ್ ಮಾಡುವಂತೆ ಹೇಳಿದ್ದು, ಅವರು ಈ ಹಿಂದೆ ರಿಚಾರ್ಜ್ ಮಾಡುತ್ತಿದ್ದ 209 ರೂ. ಹಾಕಿದ್ದಾರೆ. ಆಗ ಆ ಆರೋಪಿಯು ನೀವು ಈಗ ರಿಚಾರ್ಜ್ ಮಾಡಿದ ಹಣ ನನ್ನ ಸಿಸ್ಟಂನಲ್ಲಿ ತೋರಿಸಲು ತಡವಾಗುತ್ತದೆ.
ಅದಕ್ಕೆ ನೀವು ನಾನು ಲಿಂಕ್ ಕಳುಹಿಸುತ್ತೇನೆ. ಅದರಲ್ಲಿ ರಿಚಾರ್ಜ್ ಮಾಡಿದರೆ ಕೂಡಲೇ ರಿಚಾರ್ಜ್ ಆಗುತ್ತದೆ. ಈಗಾಗಲೇ ರಿಚಾರ್ಜ್ ಮಾಡಿದ ಹಣ ಕೂಡ ಅದಕ್ಕೆ ಸೇರುತ್ತದೆ ಎಂಬುದಾಗಿ ಹೇಳಿ ಲಿಂಕ್ ಕಳುಹಿಸಿದ್ದ ವಿವೇಕಾನಂದರು ಅದನ್ನು ನಂಬಿ ಆ ಲಿಂಕನ್ನು ಕ್ಲಿಕ್ ಮಾಡಿ, ಮತ್ತೆ 525 ರೂ. ಹಾಕುವಂತೆ ಪತ್ನಿಗೆ ತಿಳಿಸಿದ್ದು ಅದರಂತೆ ಹಣವನ್ನು ಯುಪಿಐ ಮೂಲಕ ಕಳುಹಿಸಿದ್ದರು. ಅನಂತರ ಆತನು ವಿವೇಕಾನಂದರಿಗೆ ಕರೆ ಮಾಡಿ, ಬೇರೆ ಏನಾದರು ಸರ್ವಿಸ್ ಬೇಕೆ ಎಂದು ಕೇಳಿದ್ದು, ಆಗ ಇವರು ಟಾಟಾ ಸ್ಕೈ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್‌ಬದಲಾಯಿಸುವಂತೆ ತಿಳಿಸಿದ್ದಾರೆ. ಅನಂತರ ಆತನು ಇವರ ವಾಟ್ಯಾಪ್‌ಗೆ ಲಿಂಕ್ ಕಳುಹಿಸಿ ಹಾಯ್ ಎಂದು ಮೇಸೆಜ್ ಮಾಡಲು ತಿಳಿಸಿದ್ದು, ಇವರು ಹಾಗೇ ಮಾಡಿದ್ದಾರೆ. ಸೆ.12ರ ಸಂಜೆ ಆತ ವಿವೇಕಾನಂದರಿಗೆ ವಾಟ್ಸಪ್ ಕರೆ ಮಾಡಿ, ಬೇರೆ ಏನಾದರು ಸರ್ವಿಸ್ ಬೇಕೆ ಎಂದು ಹೇಳಿದ್ದು ಇವರು ಬೇಡವೆಂದಿದ್ದರು. ಅದಾದ ಬಳಿಕ ಸುಮಾರು ರಾತ್ರಿ ವಿವೇಕಾನಂದ ಹಾಗೂ ಅವರ ಪತ್ನಿಯ ಮೊಬೈಲ್ ನಲ್ಲಿ ಬ್ಯಾಂಕ್ ಖಾತೆಯ ಹಣ ಚೆಕ್ ಮಾಡಿದಾಗ ಒಂದು ಬ್ಯಾಂಕ್ ಖಾತೆಯಿಂದ ಗೂಗಲ್ ಪೇ ಮೂಲಕ 86 ಸಾವಿರ ರೂ., ಇನ್ನೊಂದು ಬ್ಯಾಂಕ್ ಖಾತೆಯಿಂದ 12 ಸಾವಿರ ರೂ. ಕಡಿತವಾಗಿರುವುದು ಬೆಳಕಿಗೆ ಬಂದಿದೆ.
ಅನಂತರ ಸೈಬರ್ ಸಹಾಯವಾಣಿಗೆ ಕರೆ ಮಾಡಿ ವಿವೇಕಾನಂದರು ದೂರು ನೀಡಿದ್ದು, ಬ್ಯಾಂಕ್ ಕಸ್ಟಮರ್ ಕೇರ್‌ಗೆ ಕರೆ ಮಾಡಿ, ಬ್ಯಾಂಕ್ ಖಾತೆ ಪ್ರೀಜ್ ಮಾಡಿಸಿ, ಸೆ.15ಕ್ಕೆ ಬ್ಯಾಂಕಿಗೆ ಹೋದಾಗ ಖಾತೆಯಿಂದ ಮತ್ತೆ 90 ಸಾವಿರ ರೂ. ಗೂಗಲ್ ಪೇ ಮೂಲಕ ಕಡಿತಗೊಂಡಿರುವುದು ತಿಳಿದಿದ್ದು, ಸೈಬರ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ






