ಗಣೇಶ ಹಬ್ಬ: ಖಾಸಗಿ ಬಸ್ ದರ ಗಗನಕ್ಕೆ! ಸಾಮಾನ್ಯ ದರಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚಳ..KSRTC ರಿಯಾಯಿತಿಯೊಂದಿಗೆ 2,400 ವಿಶೇಷ ಬಸ್
Views: 18
ಕನ್ನಡ ಕರಾವಳಿ ಸುದ್ದಿ: ಗೌರಿ-ಗಣೇಶ ಹಬ್ಬ ಹಾಗೂ ಸಾಲು ರಜೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ತಮ್ಮ ಊರುಗಳತ್ತ ತೆರಳುತ್ತಿರುವ ಪ್ರಯಾಣಿಕರಿಗೆ ಖಾಸಗಿ ಬಸ್‌ಗಳ ಟಿಕೆಟ್ ದರ ಏರಿಕೆ ಬಿಸಿ ತಟ್ಟಿದೆ. ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಹಲವು ಪ್ರಮುಖ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳ ದರ ಸಾಮಾನ್ಯ ದಿನಗಳಿಗಿಂತ ಮೂರ್ನಾಲ್ಕು ಪಟ್ಟು ಹೆಚ್ಚಳವಾಗಿರುವುದು ಕಂಡುಬಂದಿದೆ.
ಸೆ.12ರಂದು ಎರಡನೇ ಶನಿವಾರ, ಸೆ.13ರಂದು ಭಾನುವಾರ ಹಾಗೂ ಸೆ.14ರಂದು ಗೌರಿ-ಗಣೇಶ ಹಬ್ಬ ಇರುವುದರಿಂದ ಸತತ ರಜೆ ದೊರೆತಿದೆ. ಹೀಗಾಗಿ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳತ್ತ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇದೇ ಬೇಡಿಕೆ ಆಧರಿಸಿ ಕೆಲವು ಖಾಸಗಿ ಬಸ್ ಗಳಲ್ಲಿ ದರ ಏರಿಕೆಯಾಗಿದೆ.
ಸಾಮಾನ್ಯ ದಿನಗಳಲ್ಲಿ ಖಾಸಗಿ ಬಸ್ ದರ 500 ರೂ. ಆಸುಪಾಸಿನಲ್ಲಿದ್ದ ಕೆಲವು ಮಾರ್ಗಗಳ ಟಿಕೆಟ್ ದರ ಹಬದ ಸಂದರ್ಭದಲ್ಲಿ 3,500 ರು.ರವರೆಗೂ ಏರಿಕೆಯಾಗಿದೆ ಎಂದು ವರದಿಯಾಗಿದೆ. ಬೆಂಗಳೂರು-ಹೈದರಾಬಾದ್ ಮಾರ್ಗದಲ್ಲಿ 2,899 ರೂ, ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ 2,499 ರು. ಹಾಗೂ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ 2,396 ರು. ರಷ್ಟು ದರದಲ್ಲಿ ಟಿಕೆಟ್ ಮಾರಾಟವಾಗುತ್ತಿರುವ ಉದಾಹರಣೆಗಳೂ ವರದಿಯಾಗಿವೆ.
ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ಕೆಎಸ್‌ಆರ್‌ಟಿಸಿ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಗೆ 2,400 ಹೆಚ್ಚುವರಿ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದೆ. ಸೆ.11ರಿಂದ 13ರವರೆಗೆ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ವಿಶೇಷ ಬಸ್‌ಗಳು ಸಂಚರಿಸುತ್ತಿದ್ದು, ಹಬ್ಬ ಮುಗಿದ ಬಳಿಕ ಸೆ.14ರಿಂದ ಬೆಂಗಳೂರಿಗೆ ವಾಪಸ್ ಬರುವ ಪ್ರಯಾಣಿಕರಿಗೂ ಹೆಚ್ಚುವರಿ ಸೇವೆ ಕಲ್ಪಿಸಲಾಗುತ್ತಿದೆ. ಮೆಜೆಸ್ಟಿಕ್, ಸ್ಯಾಟಲೈಟ್ ಬಸ್ ನಿಲ್ದಾಣ ಹಾಗೂ ಶಾಂತಿನಗರದಿಂದ ಹೆಚ್ಚುವರಿ ಸೇವೆಗಳನ್ನು ನಿರ್ವಹಿಸಲಾಗುತ್ತಿದೆ.
ಮಂಗಳೂರು, ಶಿವಮೊಗ್ಗ, ಹಾಸನ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಲಬುರಗಿ ಸೇರಿದಂತೆ ಪ್ರಯಾಣಿಕರ ಬೇಡಿಕೆ ಹೆಚ್ಚಿರುವ ಪ್ರಮುಖ ಮಾರ್ಗಗಳಿಗೆ ವಿಶೇಷ ಬಸ್‌ಗಳನ್ನು ನಿಯೋಜಿಸಲಾಗಿದೆ. ಇದಲ್ಲದೆ, 270 ಮೀಸಲು ಬಸ್‌ಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದು,
ಪ್ರಯಾಣಿಕರನ್ನ ಪ್ರೋತ್ಸಾಹಿಸಲು ಹಾಗೂ ಹಬ್ಬದ ಪ್ರಯಾಣವನ್ನ ಸುಲಭಗೊಳಿಸಲು ವಿಶೇಷ ರಿಯಾಯಿತಿಗಳನ್ನು ಕೆಎಸ್‌ಆರ್‌ಟಿಸಿ ಘೋಷಿಸಿದೆ. ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದರೆ ಶೇಕಡಾ 5ರಷ್ಟು ರಿಯಾಯಿತಿ ಸಿಗಲಿದೆ.ಅದೇ ರೀತಿ ಹೋಗುವ ಮತ್ತು ಬರುವ ಎರಡೂ ಕಡೆಯ ಪ್ರಯಾಣದ ಟಿಕೆಟ್‌ಗಳನ್ನ ಒಟ್ಟಿಗೆ ಕಾಯ್ದಿರಿಸಿದಲ್ಲಿ, ಬರುವ ಪ್ರಯಾಣದ ದರದಲ್ಲಿ ಶೇ.10 ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
ಖಾಸಗಿ ಬಸ್ ದರ ಎಷ್ಟಾಗಿದೆ?
ಬೆಂಗಳೂರು-ಹುಬ್ಬಳ್ಳಿ
475-1,100—1,200-4,200
ಬೆಂಗಳೂರು-ಬೆಳಗಾವಿ
389-1,200—1,129-5,500
ಬೆಂಗಳೂರು-ದಾವಣಗೆರೆ
450-1,300—-750-5,500
ಬೆಂಗಳೂರು-ಮಂಗಳೂರು
650-1,300—1,200-4,500
ಬೆಂಗಳೂರು-ಹಾಸನ
463-1,000—750-1,600
ಬೆಂಗಳೂರು-ಕಲಬುರಗಿ
750-1,000—1,200-2,200
ಕೆಎಸ್‌ಆರ್‌ಟಿಸಿ ವಿಶೇಷ ಬಸ್ ಎಲ್ಲೆಲ್ಲಿ?
ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ ಸೇರಿದಂತೆ ಹಲವು ನಗರಗಳಿಗೆ ಹೆಚ್ಚುವರಿ ಸೇವೆ ಕಲ್ಪಿಸಲಾಗುತ್ತಿದೆ. ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಹಾಗೂ ಮಡಿಕೇರಿ ಮಾರ್ಗ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಪ್ರಮುಖ ನಗರಗಳಿಗೂ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳಿಗೆ ಮುಂಗಡ ಆಸನ ಕಾಯ್ದಿರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿ ಕೆಎಸ್‌ಆರ್ ಟಿಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ನಿಗಮ ತಿಳಿಸಿದೆ.






