ನಾಪತ್ತೆಯಾಗಿದ್ದ ಯುವತಿಯ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬ: 27 ತಿಂಗಳ ನಂತರ ಯುವತಿ ಮನೆಗೆ ವಾಪಸ್!
Views: 32
ಕನ್ನಡ ಕರಾವಳಿ ಸುದ್ದಿ:ಕಾಲುವೆಯೊಂದರಲ್ಲಿ ಅಪರಿಚಿತ ಯುವತಿಯ ಕೊಳೆತ ಶವ ಪತ್ತೆಯಾಗಿದೆ. ಆಕೆಯ ಕೈಯಲ್ಲಿದ್ದ ಬಳೆ ಹಾಗೂ ಉಂಗುರವನ್ನು ನೋಡಿದ ಶಿವಾನಿ ಪೋಷಕರು, ಆ ಶವ ತಮ್ಮ ಮಗಳು ಶಿವಾನಿಯದ್ದೇ ಎಂದು ಗುರುತಿಸಿದ್ದಾರೆ. ತದನಂತರ ಶವವನ್ನು ಪಡೆದುಕೊಂಡು ಅಂತ್ಯಸಂಸ್ಕಾರವನ್ನೂ ನೆರವೇರಿಸಿದ್ದಾರೆ.
ಈ ಘಟನೆಯ ನಂತರ ಶಿವಾನಿಯ ಪತಿಯ ಕುಟುಂಬದವರ ವಿರುದ್ಧ ವರದಕ್ಷಣೆ ಕಿರುಕುಳ ಹಾಗೂ ಕೊಲೆ ಪ್ರಕರಣ ದಾಖಲಾಗಿತ್ತು. ಆದರೆ, ಶವದಿಂದ ಸಂಗ್ರಹಿಸಿದ ಡಿಎನ್ಎ ಮಾದರಿಗಳು ಶಿವಾನಿ ಪೋಷಕರ ಡಿಎನ್ಎ ಜೊತೆ ತಾಳೆಯಾಗುತ್ತಿಲ್ಲ ಎಂದು ಫೊರೆನ್ಸಿಕ್ ವರದಿಯಲ್ಲಿ ದೃಢಪಟ್ಟಿದೆ. ಇದರಿಂದ ಆ ಕೇಸ್ ರದ್ದಾಗಿದೆ.
ಇದೇ ವೇಳೆ, ನಾಪತ್ತೆಯಾದ 27 ತಿಂಗಳ ನಂತರ ಕಳೆದ ಶನಿವಾರ ಶಿವಾನಿ ಅನಿರೀಕ್ಷಿತವಾಗಿ ಜೀವಂತವಾಗಿ ತನ್ನ ತೋಷಕರ ಮನೆಗೆ ವಾಪಸ್ ಬಂದಿದ್ದಾಳೆ. ಇದರಿಂದ ಕುಟುಂಬ ಸದಸ್ಯರೊಂದಿಗೆ ಪೊಲೀಸರೂ ದಂಗಾಗಿದ್ದಾರೆ.
ಶಿವಾನಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಅನೇಕ ಕುತೂಹಲಕಾರಿ ವಿಷಯಗಳು ಹೊರಬಂದಿವೆ. ಪರಾ ಪ್ರದೇಶದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ವಹಿಸುತ್ತಿರುವ ಸಾರ್ವಜನಿಕ ಶೌಚಾಲಯ ಕೇಂದ್ರವನ್ನು ನೋಡಿಕೊಳ್ಳುವ ಜಾವೇದ್ ಎಂಬಾತನೊಂದಿಗೆ ಶಿವಾನಿ ಕೆಲವು ಕಾಲದಿಂದ ಒಟ್ಟಿಗೆ ವಾಸಿಸುತ್ತಿರುವುದು ಪೊಲೀಸರಿಗೆ ತಿಳಿದುಬಂದಿದೆ.
ಜಾವೇದ್ ಹಲವು ಬಾರಿ ಮನೆಗೆ ವಾಪಸ್ ಹೋಗುವಂತೆ ಶಿವಾನಿಗೆ ಸಲಹೆ ನೀಡಿದರೂ, ಆಕೆ ಮಾತ್ರ ಮನೆಗೆ ಹೋಗಲು ನಿರಾಕರಿಸಿದ್ದಾಳೆ ಎನ್ನಲಾಗಿದೆ. ಪ್ರಸ್ತುತ ಆಕೆ ತನ್ನ ಸ್ವಯಂಪ್ರೇರಿತ ನಿರ್ಧಾರದ ಮೇಲೆಯೇ ಪೋಷಕರ ಮನೆಗೆ ವಾಪಸ್ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಲಕ್ನೋ ಬಿಕೆಟಿನಿವಾಸಿ ಶಿವಾನಿ ಜೀವಂತವಾಗಿ ವಾಪಸ್ ಬಂದಿರುವುದರಿಂದ ಪೊಲೀಸರು ಈ ಪ್ರಕರಣದ ಬಗ್ಗೆ ಮತ್ತೊಮ್ಮೆ ಆಳವಾದ ತನಿಖೆ ಆರಂಭಿಸಿದ್ದಾರೆ. ಆಕೆ ಸ್ವಯಂಪ್ರೇರಿತವಾಗಿಯೇ ಮನೆಯಿಂದ ಹೊರಟು ಹೋದಳಾ? ಅಥವಾ ಯಾರಾದರೂ ಅಪಹರಿಸಿದ್ದರಾ? ಎಂಬ ವಿಷಯಗಳ ಸ್ಪಷ್ಟತೆಗಾಗಿ ಮ್ಯಾಜಿಸ್ಟ್ರೇಟ್ ಎದುರು ಶಿವಾನಿಯ ಹೇಳಿಕೆಯನ್ನು ದಾಖಲಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.






