ನಾಗರ ಹಾವು, ಕಾಳಿಂಗ ಕಡಿತಕ್ಕೆ ಔಷಧಿ ಕಂಡುಹಿಡಿದ ಐಐಎಸ್‌ಸಿ ಸಂಶೋಧಕರ ತಂಡ
Views: 0
ಕನ್ನಡ ಕರಾವಳಿ ಸುದ್ದಿ: ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಹಾಗೂ ಡೆನ್ಮಾರ್ಕ್ ಸಂಶೋಧಕರ ತಂಡಗಳು ಜಂಟಿಯಾಗಿ ಭಾರತೀಯ ನಾಗರಹಾವು ಹಾಗೂ ಕಾಳಿಂಗ ಸರ್ಪಗಳ ಕಡಿತಕ್ಕೆ ಹೊಸ ಔಷಧವನ್ನು (ಆ್ಯಂಟಿ ವಿನಮ್) ಸಂಶೋಧಿಸಿದ್ದಾರೆ.
ಐಐಎಸ್‌ಸಿಯ ಪರಿಸರ ವಿಜ್ಞಾನ ಕೇಂದ್ರದ ಸಂಶೋಧಕರು ಹಾಗೂ ಡೆನ್ಮಾರ್ಕ್ ತಾಂತ್ರಿಕ ವಿಶ್ವವಿದ್ಯಾಲಯದ ವಿಜ್ಞಾನಿಗಳು ಜಂಟಿಯಾಗಿ ಕೃತಕವಾಗಿ ರೂಪಿಸಿದ ನ್ಯಾನೋಬಾಡಿ ಆಧಾರಿತ ಹೊಸ ಆ್ಯಂಟಿವಿನಮ್ ಸಂಶೋಧನೆಯ ವಿವರಗಳು ಪ್ರತಿಷ್ಠಿತ ಸೈನ್ಸ್ ಟ್ರಾನ್ಸೆಷನಲ್ ಮೆಡಿಸಿನ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿವೆ.ಈಗಾಗಲೇ ಪ್ರಾಯೋಗಿಕವಾಗಿ ಇಲಿಗಳ ಮೇಲೆ ಹೊಸ ಔಷಧದ ಪ್ರಯೋಗ ಮಾಡಲಾಗಿದ್ದು, ಉತ್ತಮ ಫಲಿತಾಂಶ ನೀಡಿದೆ. ಇದು ಸಾಮಾನ್ಯ ನಾಗರಹಾವು, ಭಾರತದ ಕಾಳಿಂಗ ಸರ್ಪ ಪ್ರಭೇದಗಳು ಸೇರಿದಂತೆ ಬಹುತೇಕ ಎಲ್ಲ ಮಾದರಿಯ ಭಾರತೀಯ ನಾಗರ ಹಾವುಗಳ ವಿಷದ ವಿರುದ್ಧ ಸಂಪೂರ್ಣ ರಕ್ಷಣೆ ನೀಡಲಿದೆ. ಹಾವಿನ ವಿಷ ಶರೀರ ಸೇರಿದ 30 ನಿಮಿಷಗಳ ನಂತರ ಹಾಗೂ ಪಾರ್ಶ್ವವಾಯು ಅಥವಾ ನರಸಂಬಂಧಿ ಲಕ್ಷಣಗಳು ಕಾಣಿಸಿಕೊಂಡ ನಂತರವೂ ಪರಿಣಾಮಕಾರಿಯಾಗಿದೆ. ಇಲಿಗಳು ಸಂಪೂರ್ಣವಾಗಿ ಗುಣಮುಖವಾಗಿವೆ ಎಂದು ಐಐಎಸ್‌ಸಿ ಹೇಳಿದೆ.
ಕಡಿಮೆ ಪ್ರಮಾಣದ ಡೋಸ್: ಈಗ ಆಗಿರುವ ಸಂಶೋಧನೆಯ ಪ್ರಕಾರ, ಅತ್ಯಂತ ಕಡಿಮೆ ಪ್ರಮಾಣದ ಡೋಸ್ ನೀಡಿ ಹಾವಿನ ವಿಷದ ಪರಿಣಾಮವನ್ನು ತಗ್ಗಿಸಬಹುದು. ಇದರಿಂದ ಉತ್ಪಾದನಾ ವೆಚ್ಚ ಹಾಗೂ ಅಡ್ಡಪರಿಣಾಮಗಳು ಕಡಿಮೆಯಾಗಲಿವೆ ಎಂದು ಐಐಎಸ್‌ಸಿ ತಿಳಿಸಿದೆ.
ಭಾರತದಲ್ಲಿ ಪ್ರತಿವರ್ಷ ಸುಮಾರು 50,000 ಜನರು ಹಾವು ಕಡಿತದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದು, ಇದು ಜಗತ್ತಿನಲ್ಲೇ ಗರಿಷ್ಠ ಪ್ರಮಾಣವಾಗಿದೆ. ಹಾವು ಕಡಿತದ ಚಿಕಿತ್ಸಾ ವಿಧಾನವು ಕಳೆದ 100 ವರ್ಷಗಳಿಂದ ಬದಲಾಗಿಲ್ಲ. ಭಾರತದ ಹಾವು ಕಡಿತದ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಬಲ್ಲ ಹೊಸ ತಲೆಮಾರಿನ ಏಕೈಕ ಔಷಧಿ ಇದಾಗಿದೆ ಎಂದು ಐಐಎಸ್‌ಸಿ ಸಹಾಯಕ ಪ್ರಾಧ್ಯಾಪಕ ಡಾ.ಕಾರ್ತಿಕ್ ಸುನಗರ್ ಹೇಳಿದ್ದಾರೆ.






