ಆರೋಗ್ಯ

ಈ ಆಸ್ಪತ್ರೆಯಲ್ಲಿ ಹೆರಿಗೆ ಬೇಡವೆಂದು ಕಣ್ಣೀರಿಟ್ಟ ಗರ್ಭಿಣಿ.. ಕೊನೆಗೂ ನಡೆಯಿತು ದುರಂತ!

Views: 84

ಕನ್ನಡ ಕರಾವಳಿ ಸುದ್ದಿ:  ನನ್ನನ್ನು ಇಲ್ಲಿಂದ ಮೊದಲು ಕರೆದುಕೊಂಡು ಹೋಗಿ, ಈ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವುದು ಬೇಡ. ಇಲ್ಲಿನ ಚಿಕಿತ್ಸೆಯಿಂದ ನಾನು ಮತ್ತು ನನ್ನ ಮಗು ಬದುಕುಳಿಯುವುದಿಲ್ಲ.. ಎಂದು 25 ವರ್ಷದ ಗರ್ಭಿಣಿ ಕಲ್ಪನಾ ಮಿಶ್ರಾ, ಹೆರಿಗೆ ವಾರ್ಡ್‌ನ ಹೊರಗೆ ನಿಂತು ತನ್ನ ಕುಟುಂಬದವರ ಬಳಿ ಕಣ್ಣೀರಿಡುತ್ತಾ ಬೇಡಿಕೊಂಡರು.

‘ಏನೂ ಆಗುವುದಿಲ್ಲ ಧೈರ್ಯವಾಗಿರು’ ಎಂದು ಆಕೆಯನ್ನು ಆಸ್ಪತ್ರೆಗೆ ಕಳುಹಿಸಿದ ಕುಟುಂಬಸ್ಥರಿಗೆ ಕಾದಿದ್ದು ಚೇತರಿಸಿಕೊಳ್ಳಲಾಗದ ಆಘಾತ. ಕಲ್ಪನಾ ಅಂಜಿದಂತೆಯೇ, ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ನವಜಾತ ಶಿಶು ಹಾಗೂ ತಾಯಿ ಇಬ್ಬರೂ ಅಸಹಜವಾಗಿ ಪ್ರಾಣ ಕಳೆದುಕೊಂಡ ದುರ್ಘಟನೆ ಮಧ್ಯಪ್ರದೇಶದ ರೇವಾದ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಯಲ್ಲಿ ನಡೆದಿದೆ.

ಆಪರೇಷನ್‌ಗೆ ತೆರಳುವ ಮುನ್ನ ಕಲ್ಪನಾ ಆತಂಕದಿಂದ ಕುಟುಂಬದವರ ಬಳಿ ತೋಡಿಕೊಂಡ ಅಳಲನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೊೀ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯವೇ ಈ ಎರಡು ಜೀವಗಳ ಬಲಿಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಏನಿದು ಘಟನೆ

ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಕಲ್ಪನಾ ಮಿಶ್ರಾ ಅವರನ್ನು ಕುಟುಂಬಸ್ಥರು ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ದಾಖಲಿಸಿದ್ದರು. ಮರುದಿನ ಆಕೆಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆದರೆ, ಶಸ್ತ್ರಚಿಕಿತ್ಸೆಯ ಬೆನ್ನಲ್ಲೇ ತಾಯಿ ಮತ್ತು ಮಗು ಇಬ್ಬರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಆಸ್ಪತ್ರೆ ಸಿಬ್ಬಂದಿಯ ಬೇಜವಾಬ್ದಾರಿಯೇ ಈ ಸಾವಿಗೆ ನೇರ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಕಲ್ಪನಾ ತನಗೆ ಉಸಿರಾಟ ಹಾಗೂ ಆರೋಗ್ಯದಲ್ಲಿ ತೊಂದರೆಯಾಗುತ್ತಿದೆ ಎಂದು ಪದೇ ಪದೇ ಹೇಳಿಕೊಂಡರೂ ವೈದ್ಯರು ಮತ್ತು ನರ್ಸ್‌ಗಳು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಉಡಾಫೆಯಿಂದ ವರ್ತಿಸಿ, ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡದೆ ಕಾಲಹರಣ ಮಾಡಿದರು ಎಂದು ಆಕೆಯ ಪೋಷಕರು ದೂರಿದ್ದಾರೆ.

ಆಸ್ಪತ್ರೆ ಎದುರು ಪ್ರತಿಭಟನೆ: ಸಾವು ಸಂಭವಿಸುತ್ತಿದ್ದಂತೆಯೇ ಕಲ್ಪನಾ ಅವರ ಸಂಬಂಧಿಕರು ಹಾಗೂ ಸಾರ್ವಜನಿಕರು ಆಸ್ಪತ್ರೆಯ ಆವರಣದಲ್ಲಿ ಜಮಾಯಿಸಿ, ತಪ್ಪಿತಸ್ಥ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭಾರಿ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಧಾವಿಸಿದ ಆಸ್ಪತ್ರೆಯ ಡೀನ್ ಸುನಿಲ್ ಅಗರ್‌ವಾಲ್ ಹಾಗೂ ಸೂಪರಿಂಟೆಂಡೆಂಟ್ ರಾಹುಲ್ ಮಿಶ್ರಾ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

Related Articles

Back to top button
error: Content is protected !!