ಕರಾವಳಿ

ಮಲ್ಪೆ ಮೀನುಗಾರಿಕಾ ಬೋಟಿನಲ್ಲಿ ಕಾರ್ಮಿಕರಿಬ್ಬರ ಮಧ್ಯೆ ಗಲಾಟೆ: ಕೊಲೆಯಲ್ಲಿ ಅಂತ್ಯ, ಪರಾರಿಯಾದ ಆರೋಪಿ ರೈಲ್ವೆ ನಿಲ್ದಾಣದಲ್ಲಿ ಸೆರೆ 

Views: 0

ಕನ್ನಡ ಕರಾವಳಿ ಸುದ್ದಿ: ಮಲ್ಪೆ ಬಂದರಿನ ಮೀನುಗಾರಿಕಾ ಬೋಟಿನಲ್ಲಿ ಮೀನುಗಾರ ಕಾರ್ಮಿಕರಿಬ್ಬರ ಮಧ್ಯೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಬಗ್ಗೆ ವರದಿಯಾಗಿದೆ.

ಮೃತರನ್ನು ಉತ್ತಕ ಕರ್ನಾಟಕದ ಅಭಿಷೇಕ್(24) ಎಂದು ಗುರುತಿಸ ಲಾಗಿದೆ. ಕೊಲೆ ಆರೋಪಿ ರಾಯಚೂರು ಜಿಲ್ಲೆಯ ದೇವದುರ್ಗ ಅರಕೆರೆಯ ಗೋವಿಂದರಾಜು(33) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕಿದಿಯೂರು ಗ್ರಾಮದ ವಾಸ್ಮತೀಶ ಕಾಂಚನ್ ಎಂಬವರ ರಾಮಮಿತ್ರ ಎಂಬ ಆಳ ಸಮುದ್ರ ಬೋಟಿನಲ್ಲಿ ಇವರಿಬ್ಬರು ಕೆಲಸ ಮಾಡಿಕೊಂಡಿದ್ದು, ಅದರಲ್ಲಿ ವಾಸ ಮಾಡುತ್ತಿದ್ದರು. ಆಗಸ್ಟ್ ಮೊದಲ ವಾರದಲ್ಲಿ ಇವರೆಲ್ಲ ಬೋಟಿನಲ್ಲಿ ಮೀನುಗಾರಿಕೆಗೆ ಸಮುದ್ರಕ್ಕೆ ಹೋಗಿ, ಆ.23ರಂದು ಮಲ್ಪೆ ಬಂದರಿಗೆ ವಾಪಸ್ಸು ಬಂದಿದ್ದರು. ಆ.24ರಂದು ಮೀನು ಖಾಲಿ ಮಾಡಿ ಕೊಂಡು ಬಾಬುತೋಟ ಧಕ್ಕೆಯ ಬಳಿ ಬೋಟನ್ನು ಲಂಗಾರು ಹಾಕಲಾಗಿತ್ತು.

ಇದರಲ್ಲಿ ಇತರ ಇಬ್ಬರು ಮೀನುಗಾರರ ಜೊತೆ ಅಭಿಷೇಕ್ ಹಾಗೂ ಗೋವಿಂದರಾಜು ಬೋಟ್‌ನಲ್ಲಿ ಉಳಿದು ಕೊಂಡಿದ್ದರು. ಉಳಿದವರು ಊರಿಗೆ ಹೋಗಿದ್ದರು ಎಂದು ತಿಳಿದುಬಂದಿದೆ. ಆ.24ರಂದು ರಾತ್ರಿ ವಿಪರೀತ ಮದ್ಯ ಸೇವಿಸಿದ್ದ ಇವರಿಬ್ಬರು ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಮಾಡಿಕೊಂಡಿದ್ದರು. ಇದೇ ಸಿಟ್ಟಿನಲ್ಲಿದ್ದ ಗೋವಿಂದರಾಜು, ಆ.25ರಂದು ಬೆಳಗಿನ ಜಾವಾ 3.30ರ ಸುಮಾರಿಗೆ ಬೋಟಿನಲ್ಲಿದ್ದ ಚೂರಿಯಿಂದ ಅಭಿಷೇಕ್‌ನನ್ನು ಇರಿದು ಕೊಲೆ ಮಾಡಿದನು ಎನ್ನಲಾಗಿದೆ. ಕೃತ್ಯ ಎಸಗಿದ ಬಳಿಕ ಗೋವಿಂದರಾಜು ಅಲ್ಲಿಂದ ಓಡಿ ಹೋಗಿರುವುದಾಗಿ ತಿಳಿದುಬಂದಿದೆ.

ಇದನ್ನು ಗಮನಿಸಿದ ತಾಂಡೇಲು ಈ ಬಗ್ಗೆ ತಕ್ಷಣ ಮಲ್ಪೆ ಪೊಲೀಸರಿಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತರಾದ ಮಲ್ಪೆ ಪೊಲೀಸ್‌ ಠಾಣಾ ಎಸ್ಟ್ ಅನೀಲ್ ಕುಮಾರ್ ಡಿ., ಸಿಬ್ಬಂದಿ ಆದರ್ಶ ಮತ್ತು ಕುಬೇರ ಆರೋಪಿ ಪತ್ತೆಗಾಗಿ ಉಡುಪಿ ಕರೆ ತೆರಳಿದರು. ಈ ವೇಳೆ ಗೋವಿಂದರಾಜು ಉಡುಪಿ ರೈಲ್ವೆ ನಿಲ್ದಾಣದ ಮೂಲಕ ಹೈದರಾಬಾದ್ ಅಥವಾ ಮುಂಬೈ ಕಡೆ ಪರಾರಿಯಾಗಲು ಯತ್ನಿಸುತ್ತಿದ್ದನು.ಇದನ್ನು ಅರಿತ ಪೊಲೀಸರು ಕೂಡಲೇ ಆತನನ್ನು ವಶಕ್ಕೆ ಪಡೆದುಕೊಂಡು ಬಂಧಿಸಿದರು.

ಆರೋಪಿಯನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಕೊಲೆಗೆ ನಿಖರವಾದ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Related Articles

Back to top button
error: Content is protected !!