“ನನ್ನ ಸಾವಿಗೆ ನನ್ನ ಗಂಡ ಅವರ ಅಕ್ಕನೇ ಕಾರಣ”ಡೆತ್‌ನೋಟ್ ಬರೆದಿಟ್ಟು ನವವಿವಾಹಿತೆ ಆತ್ಮಹತ್ಯೆ
Views: 61
ಕನ್ನಡ ಕರಾವಳಿ ಸುದ್ದಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನವವಿವಾಹಿತೆಯೊಬ್ಬರು ಡೆತ್‌ನೋಟ್ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಶ್ವೇತಾ (21) ಆತ್ಮಹತ್ಯೆ ಮಾಡಿಕೊಂಡವರು. ಘಟನೆ ಸಂಬಂಧ ಶ್ವೇತಾ ಪತಿ ಮೂರ್ತಿ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಶ್ವೇತಾ ಪೋಷಕರು ನೀಡಿದ ಸಂಬಂಧ ಮೂರ್ತಿ, ಆತನ ಸಹೋದರಿ, ಪೋಷಕರ ವಿರುದ್ಧ ದೂರು ದಾಖಲಾಗಿದೆ. ಜುಲೈ 12ರಂದು ಸಂಜೆ ಹೆಗ್ಗನಹಳ್ಳಿ ಕ್ರಾಸ್ ಬಳಿ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದರು.
ಕಳೆದ ವರ್ಷ ಮಂತ್ರಾಲಯಕ್ಕೆ ರೈಲಿನಲ್ಲಿ ಹೋಗುವಾಗ ಶ್ವೇತಾ ಮತ್ತು ಮೂರ್ತಿ ಪರಿಚಯವಾಗಿದ್ದು, ಆ ನಂತರ ಕೆಲ ತಿಂಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ನಾಲ್ಕು ತಿಂಗಳ ಹಿಂದಷ್ಟೇ ಪೋಷಕರ ಒಪ್ಪಿಸಿ ಮದುವೆಯಾಗಿದ್ದರು. ಮೂರ್ತಿ ಇನ್ಸೂರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಶ್ವೇತಾ ಎರಡು ತಿಂಗಳ ಹಿಂದಷ್ಟೇ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ದಂಪತಿ ಹೆಗ್ಗನಹಳ್ಳಿ ಕ್ರಾಸ್‌ನ ಮನೆಯಲ್ಲಿ ವಾಸವಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ಹೆಗ್ಗನಹಳ್ಳಿ ಕ್ರಾಸ್ ಸಮೀಪದ ರಾಜಗೋಪಾಲನಗರದಲ್ಲಿ ಮೂರ್ತಿ ಸಹೋದರಿ ನರಸಮ್ಮ ಕುಟುಂಬ ಸಮೇತ ವಾಸವಾಗಿದ್ದು, ಪ್ರತಿದಿನ ಮೂರ್ತಿ ಅಲ್ಲಿಗೆ ಹೋಗಿ ಬರುತ್ತಿದ್ದ. ಈ ಮಧ್ಯೆ ಮೂರ್ತಿ, ತನ್ನ ಸಹೋದರಿಗಾಗಿ ಪತ್ನಿ ಶ್ವೇತಾಗೆ ವರದಕ್ಷಿಣೆ ಹಣ ಕೊಡುವಂತೆ ಪೀಡಿಸುತ್ತಿದ್ದ ಎಂದು ಹೇಳಲಾಗಿದೆ. ಹೀಗಾಗಿ ಶ್ವೇತಾ, ನಿಮ್ಮ ಸಹೋದರಿ ನರಸಮ್ಮ ಜತೆ ಮಾತನಾಡದಂತೆ ಪತಿ ಮೂರ್ತಿಗೆ ಸೂಚಿಸಿದ್ದಳು. ಆದರೆ, ಚಿಕ್ಕವಯಸ್ಸಿನಿಂದ ನನ್ನನ್ನು ಸಾಕಿದ್ದಾರೆ. ಮಾತನಾಡದಿರಲು ಸಾಧ್ಯವಿಲ್ಲ ಎಂದು ಹೇಳಿದ್ದ. ಭಾನುವಾರ ಕೂಡ ದಂಪತಿ ನಡುವೆ ಜಗಳ ನಡೆದಿದೆ. ನಂತರ ಮನೆಯಿಂದ ಹೊರಗಡೆ ಹೋಗಿದ್ದ ಶ್ವೇತಾ, ಕೆಲ ಹೊತ್ತಿನ ಬಳಿಕ ಮನೆಗೆ ಬಂದಿದ್ದಾರೆ. ಆದರೆ, ಪತಿ ಮನೆ ಬೀಗ ಹಾಕಿಕೊಂಡು ಹೋಗಿದ್ದರಿಂದ ಮನೆ ಮಾಲಿಕರಿಂದ ಮತ್ತೊಂದು ಕೀ ಪಡೆದು ಒಳ ಹೋದ ಶ್ವೇತಾ, ಡೆತ್‌ನೋಟ್ ಬರೆದಿಟ್ಟು ಕೋಣೆಯಲ್ಲಿ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇತ್ತ ಮನೆಗೆ ಪತ್ನಿ ಬಂದಿರುವ ವಿಚಾರ ತಿಳಿದ ಮೂರ್ತಿ ತಡರಾತ್ರಿ 11 ಗಂಟೆ ಸುಮಾರಿಗೆ ಮನೆಗೆ ಬಂದು, ಕಾಲಿಂಗ್ ಬೆಲ್ ಒತ್ತಿದ್ದಾನೆ. ಎಷ್ಟು ಸಮಯವಾದರೂ ಬಾಗಿಲು ತೆರೆಯದಿದ್ದಾಗ ತನ್ನ ಬಳಿ ಇದ್ದ ಮತ್ತೊಂದು ಕೀ ಮೂಲಕ ಬಾಗಿಲು ತೆಗೆದು ಒಳಗೆ ಹೋದಾಗ ಶ್ವೇತಾ ಬೆಡ್‌ರೂಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಕಿರುಚಿದ್ದಾನೆ.
ಕೂಗಾಟದ ಶಬ್ದ ಕೇಳಿ ಮನೆ ಮಾಲಿಕರು, ಅಕ್ಕಪಕ್ಕದ ನಿವಾಸಿಗಳು ಅವರ ಮನೆ ಬಳಿ ಹೋಗಿ ನೋಡಿದಾಗ ಶ್ವೇತಾ ಆತಹತ್ಯೆ ಮಾಡಿಕೊಂಡಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಪರಿಶೀಲಿಸಿ ಸ್ಥಳದಲ್ಲಿ ದೊರೆತ ಡೆತ್‌ನೋಟ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು, ಮೂರ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.
ಯಾರನ್ನು ಸುಮ್ಮನೆ ಬಿಡಬೇಡ ಅಮ್ಮ: ಪುತ್ರಿ ಡೆತ್‌ನೋಟ್
ನನ್ನ ಸಾವಿಗೆ ನನ್ನ ಗಂಡ ಅವರ ಅಕ್ಕನೇ ಕಾರಣ. ಅವರಿಂದ ನನಗೆ ಹಿಂಸೆ ಆಗುತ್ತಿದೆ. ಇನ್ಮುಂದೆ ನನಗೆ ಬದುಕೋಕೆ ಆಸೆನೇ ಇಲ್ಲ ಅನ್ನೋ ರೀತಿ ಮಾಡಿದ್ದಾರೆ. ನಾನು ಸತ್ತರೆ ಅವರನ್ನು ಮಾತ್ರ ಸುಮ್ಮನೆ ಬಿಡಬೇಡ ಅಮ್ಮ.. ನನ್ನಿಂದ ತಪ್ಪಾಯ್ತು ಕ್ಷಮಿಸಿ ಬೀಡು…. ಇಂತಿ ನಿನ್ನ ಪ್ರೀತಿಯ ಮಗಳು ಎಂದು ಡೆತ್‌ನೋಟ್‌ನಲ್ಲಿ ಶ್ವೇತಾ ಬರೆದಿದ್ದಾರೆ.






