ಆರ್ಥಿಕ

ಬಿದ್ಕಲ್‌ಕಟ್ಟೆ: ಹಾರ್ದಳ್ಳಿ ಮಂಡಳ್ಳಿ ಸಂಜೀವಿನಿ ಒಕ್ಕೂಟದ 33.5 ಲಕ್ಷ ರೂ.ಅನುದಾನ ದುರುಪಯೋಗ,ಬರಹಗಾರ್ತಿ ವಿರುದ್ಧ ಪ್ರಕರಣ ದಾಖಲು

Views: 253

ಕನ್ನಡ ಕರಾವಳಿ ಸುದ್ದಿ: ಬಿದ್ಕಲ್‌ಕಟ್ಟೆಯ ಹಾರ್ದಳ್ಳಿ ಮಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಬಿದ್ಕಲ್‌ಕಟ್ಟೆಯ  ಎನ್‌ಆ‌ರ್ ಎಲ್‌ಎಂ ಸಮೃದ್ಧ ಸಂಜೀವಿನಿ ಗ್ರಾ.ಪಂ.ಮಟ್ಟದ ಒಕ್ಕೂಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಬರಹಗಾರ್ತಿ ಹಣಕಾಸು ಅವ್ಯವಹಾರ ನಡೆಸಿರುವ ಆರೋಪ ಕೇಳಿ ಬಂದಿದೆ.

ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟಕ್ಕೆ ಸರ್ಕಾರದಿಂದ ಬಂದಿದ್ದ ಲಕ್ಷಾಂತರ ರೂಪಾಯಿ ಅನುದಾನವನ್ನು ನಕಲಿ ಸಹಿ ಹಾಗೂ ಸೀಲು ಬಳಸಿ ಸ್ವಂತಕ್ಕೆ ಉಪಯೋಗಿಸಿಕೊಂಡು ಸುಮಾರು 33.50 ಲಕ್ಷ ರೂಪಾಯಿ ವಂಚಿಸಿರುವ ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಅಶ್ವಿನಿ (33) ಪ್ರಕರಣದ ಆರೋಪಿಯಾಗಿದ್ದಾರೆ. ಇವರು 2022 ರಿಂದ ‘ಸಮೃದ್ಧಿ ಸಂಜೀವಿನಿ’ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಲ್ಲಿ ಮುಖ್ಯ ಬರಹಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಒಕ್ಕೂಟದ ವ್ಯಾಪ್ತಿಯಲ್ಲಿ ಒಟ್ಟು 54 ಸ್ವಸಹಾಯ ಸಂಘಗಳು ಒಳಪಟ್ಟಿದ್ದವು.

ಸರಕಾರದಿಂದ 2022 ರಿಂದ ಈ ಒಕ್ಕೂಟದ ಕೆನರಾ ಬ್ಯಾಂಕ್ ಬಿದ್ಕಲ್‌ಕಟ್ಟೆ ಶಾಖೆಯ ಖಾತೆಗೆ ಒಟ್ಟು ರೂ.52,50,000 ಅನುದಾನ ಬಿಡುಗಡೆಯಾಗಿತ್ತು. ಈ ಹಣವನ್ನು ಅಗತ್ಯಕ್ಕೆ ತಕ್ಕಂತೆ ವಿವಿಧ ಸ್ವಸಹಾಯ ಸಂಘಗಳಿಗೆ ನಿಯಮಾನುಸಾರ ಹಂಚಿಕೆ ಮಾಡುವ ಜವಾಬ್ದಾರಿ ಆರೋಪಿ ಅಶ್ವಿನಿ ಅವರದ್ದಾಗಿತ್ತು.

ಆದರೆ, ಆರೋಪಿತೆಯು ಸರಕಾರದ ಹಣವನ್ನು ಸ್ವಸಹಾಯ ಸಂಘಗಳಿಗೆ ಸರಿಯಾಗಿ ಹಂಚಿಕೆ ಮಾಡದೇ, ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಯವರ ಸಹಿ ಮತ್ತು ಸೀಲನ್ನು ನಕಲಿ ಮಾಡಿದ್ದಾರೆ. ಜೊತೆಗೆ ತಾವು ಅಧ್ಯಕ್ಷರಾಗಿರುವ ‘ಮಂದಾರ ಸ್ವಸಹಾಯ ಸಂಘ’ದ ಹೆಸರಿನಲ್ಲಿ ಹಾಗೂ ಕೆಲವು ಸಂಘದ ಸದಸ್ಯರ ನಕಲಿ ಸಹಿಗಳನ್ನು ಮಾಡಿ, ಒಟ್ಟು 33,50,000 ಲಕ್ಷ ರೂಪಾಯಿ ಹಣವನ್ನು ತಮ್ಮ ಸ್ವಂತ ಲಾಭಕ್ಕೆ ಬಳಸಿಕೊಂಡು ಒಕ್ಕೂಟಕ್ಕೆ ಮೋಸ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಯಶೋಧ (53) ಎಂಬುವವರು ನೀಡಿದ ದೂರಿನ ಆಧಾರದ ಮೇಲೆ, ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

Related Articles

Back to top button
error: Content is protected !!