ಆರ್ಥಿಕ

ಬ್ಯಾಂಕ್ ಉದ್ಯೋಗಿ ನಕಲಿ ಚಿನ್ನ ಅಡವಿಟ್ಟು 1.53 ರೂ. ಕೋಟಿ ವಂಚನೆ!

Views: 71

ಕನ್ನಡ ಕರಾವಳಿ ಸುದ್ದಿ: ಇಂಡಸ್‌ಇಂಡ್ ಬ್ಯಾಂಕ್ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬ, ನಕಲಿ ಚಿನ್ನವನ್ನು ಅಡಮಾನ ಇಟ್ಟು ಸುಮಾರು ರೂ.1.53 ಕೋಟಿ ಸಾಲ ಪಡೆದು ಬ್ಯಾಂಕ್‌ಗೆ ವಂಚನೆ ಎಸಗಿರುವ ಆರೋಪ ಕೇಳಿಬಂದಿದೆ.

ಆರೋಪಿ ನಾಗೇಶ್‌ ಬ್ಯಾಂಕ್‌ನಲ್ಲಿ ಗೋಲ್ಡ್ ಲೋನ್ ಪರಿಶೀಲನೆ ಮತ್ತು ಅನುಮೋದನೆ ಜವಾಬ್ದಾರಿ ಹೊಂದಿದ್ದನು. ಇದೇ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ತನ್ನ ಸ್ನೇಹಿತರ ಹೆಸರಿನಲ್ಲಿ ನಕಲಿ ಚಿನ್ನ ಅಡಮಾನ ಇಟ್ಟು ಸಾಲ ಮಂಜೂರು ಮಾಡಿಸಿಕೊಂಡಿದ್ದಾನೆ ಎನ್ನಲಾಗಿದೆ.

ತನಿಖೆಯ ಪ್ರಕಾರ, ನಾಗೇಶ್ ನಕಲಿ ಚಿನ್ನದ ಸರಗಳಿಗೆ ಅಸಲಿ ಚಿನ್ನದ ಹಾಲ್‌ಮಾರ್ಕ್ ಹೊಂದಿರುವ ಕೊಂಡಿಗಳನ್ನು ಜೋಡಿಸುತ್ತಿದ್ದ. ಪರಿಶೀಲನೆ ವೇಳೆ ಹಾಲ್‌ಮಾರ್ಕ್ ಕಂಡುಬರುವ ಕಾರಣ ಅನುಮಾನ ಮೂಡದಂತೆ ಮಾಡುತ್ತಿದ್ದ ಎನ್ನಲಾಗಿದೆ. ಬಳಿಕ ಆತನೇ ಸಾಲವನ್ನು ಅನುಮೋದಿಸಿ, ಸುಮಾರು 15 ಖಾತೆಗಳ ಮೂಲಕ ರೂ.1.53 ಕೋಟಿ ಗೋಲ್ಡ್ ಲೋನ್ ಬಿಡುಗಡೆ ಮಾಡಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಬ್ಯಾಂಕ್‌ನ ಆಂತರಿಕ ವೇಳೆ ದಾಖಲೆಗಳಲ್ಲಿ ಅಕ್ರಮ ಪತ್ತೆಯಾಗಿದ್ದು, ನಕಲಿ ಚಿನ್ನದ ಆಧಾರದಲ್ಲಿ ಸಾಲ ನೀಡಿರುವುದು ಬೆಳಕಿಗೆ ಬಂದಿದೆ. ಬ್ಯಾಂಕ್ ಹಣ ಮರುಪಾವತಿಗೆ ಒತ್ತಡ ಹೇರಿದ ಬಳಿಕ, ನಾಗೇಶ್ ಮತ್ತೊಂದು ವಂಚನೆಗೆ ಮುಂದಾಗಿದ್ದಾನೆ ಎನ್ನಲಾಗಿದೆ.

ಸ್ನೇಹಿತರ ಮೂಲಕ ಜಗದೀಶ್ ಎಂಬ ಉದ್ಯಮಿಯನ್ನು ಸಂಪರ್ಕಿಸಿದ ನಾಗೇಶ್, ಬ್ಯಾಂಕ್‌ನಲ್ಲಿ ಕಡಿಮೆ ಬೆಲೆಗೆ ಹರಾಜಾಗುತ್ತಿರುವ ಚಿನ್ನ ಖರೀದಿಸಿದರೆ ರೂ.40 ಲಕ್ಷ ಲಾಭವಾಗುತ್ತದೆ ಎಂದು ನಂಬಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಮಾತು ನಂಬಿದ ಉದ್ಯಮಿ ರೂ.1.53 ಕೋಟಿ ಹಣ ಪಾವತಿಸಿದ್ದು, ಆ ಹಣವನ್ನು ಬ್ಯಾಂಕ್‌ಗೆ ಜಮೆ ಮಾಡಿ ನಾಗೇಶ್‌ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಬಳಿಕ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ತಾನು ಮೋಸ ಹೋಗಿರುವುದು ಜಗದೀಶ್‌ಗೆ ತಿಳಿದುಬಂದಿದ್ದು, ಅವರು ಪೀಣ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಆಧಾರದ ಮೇಲೆ ಪೀಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಆರೋಪಿ ನಾಗೇಶ್ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Related Articles

Back to top button
error: Content is protected !!