ಬಿಪಿಎಲ್ ಕಾರ್ಡ್ ಪಡೆಯಲು ಆದಾಯ ಮಿತಿ ರೂ.1.20 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸಲು ಕ್ರಮ!
Views: 23
ಕನ್ನಡ ಕರಾವಳಿ ಸುದ್ದಿ: ಬಿಪಿಎಲ್ ಕಾರ್ಡ್ ಪಡೆಯಲು ನಿಗದಿಪಡಿಸಿದ 1.20 ಲಕ್ಷ ರೂ ವಾರ್ಷಿಕ ಆದಾಯವನ್ನು ಆಡಳಿತಾತ್ಮಕ ಸುಧಾರಣೆ ಆಯೋಗದ ಶಿಪಾರಸಿನಂತೆ 3 ಲಕ್ಷ ರೂ.ಗೆ ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಚಿವ ಕೆ.ಹೆಚ್.ಮುನಿಯಪ್ಪ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ ನೇತೃತ್ವದಲ್ಲಿ ಇಂದು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಯಿತು.
ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, “ಆಹಾರ ಇಲಾಖೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಅನ್ನಭಾಗ್ಯ ಯೋಜನೆಯ ಮೂಲಕ ರಾಜ್ಯ ಸುಮಾರು 4.42 ಕೋಟಿ ಫಲಾನುಭವಿಗಳಿಗೆ 10 ಕೆ.ಜಿ ಪಡಿತರ ವಿತರಣೆ ಮಾಡುತ್ತಿದ್ದೇವೆ. ಇದರ ಮೂಲಕ ರಾಜ್ಯವನ್ನು ನಮ್ಮ ಸರ್ಕಾರವು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಿದೆ” ಎಂದು ತಿಳಿಸಿದರು.
“ಅನ್ನಭಾಗ್ಯ ಯೋಜನೆಯು ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾಗಿದ್ದು, ಯಾರೂ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಅಂದಿನ ನಮ್ಮ ಯುಪಿಎ ಸರ್ಕಾರ ಆಹಾರ ಭದ್ರತೆ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಈ ಮಹತ್ವದ ಯೋಜನೆ ಅನುಷ್ಠಾನವಾಗಿದೆ. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಪ್ರತಿ ಅರ್ಹ ಫಲಾನುಭವಿಗೆ 10 ಕೆ.ಜಿ ಪಡಿತರ ಧಾನ್ಯ ವಿತರಣೆ ಮಾಡುವ ಮೂಲಕ ಜನರ ಬದುಕಿಗೆ ಆಸರೆಯಾಗಿದೆ” ಎಂದರು.






