ಆರೋಗ್ಯ

ಚಲಿಸುತ್ತಿದ್ದ ರೈಲಿನಲ್ಲಿಯೇ ಸುರಕ್ಷಿತ ಹೆರಿಗೆ ಮಾಡಿಸಿದ ಎಸ್‌ಡಿಎಂ ಆಯುರ್ವೇದ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು!

Views: 93

ಕನ್ನಡ ಕರಾವಳಿ ಸುದ್ದಿ: ಹಾಸನದ ಎಸ್‌ಡಿಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಮಾನಸರೋಗ ಹಾಗೂ ಮನೋವಿಜ್ಞಾನ ವಿಭಾಗದ ಮೂವರು ಸ್ನಾತಕೋತ್ತರ ವಿದ್ಯಾರ್ಥಿಗಳು ಚಲಿಸುತ್ತಿದ್ದ ರೈಲಿನಲ್ಲೇ ಗರ್ಭಿಣಿಯೊಬ್ಬರಿಗೆ ಸುರಕ್ಷಿತ ಹೆರಿಗೆ ಮಾಡಿಸಿ ತಾಯಿ ಹಾಗೂ ನವಜಾತ ಶಿಶುವಿನ ಜೀವ ಉಳಿಸುವ ಮೂಲಕ ವೈದ್ಯಕೀಯ ಕೌಶಲ್ಯ, ಸಮಯೋಚಿತ ನಿರ್ಧಾರ ಮತ್ತು ಮಾನವೀಯ ಸೇವೆಗೆ ಮಾದರಿಯಾಗಿದ್ದಾರೆ.

ಡಾ. ರಶ್ಮಿ ಬೀಳಗಿ, ಡಾ. ಶಾಹಿನ್ ಎಂ ಹಾಗೂ ಡಾ. ಲತಾಶ್ರೀ ಎನ್ ಅವರು ವಾರಾಣಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು)ನಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ಹಾಸನದಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಸಹಪ್ರಯಾಣಿಕೆಯಾಗಿದ್ದ ಪೂರ್ಣ ಗರ್ಭಿಣಿಯೊಬ್ಬರಿಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡು ಗರ್ಭಜಲ ಸೋರಿಕೆಯಾಗುತ್ತಿರುವುದನ್ನು ಗಮನಿಸಿದ ಅವರು ಕೂಡಲೇ ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ವೈದ್ಯಕೀಯ ನೆರವು ನೀಡಲು ಮುಂದಾದರು.

ಗರ್ಭಿಣಿಯ ಕುಟುಂಬದವರು ಈ ಗರ್ಭಧಾರಣೆ ಅಪಾಯಕಾರಿಯಾಗಿದೆ, ಮಗುವಿನ ಆರೋಗ್ಯ ಗಂಭೀರವಾಗಿದೆ ಹಾಗೂ ಸಹಜ ಹೆರಿಗೆ ಸಾಧ್ಯವಿಲ್ಲ ಎಂದು ವೈದ್ಯರು ಈ ಹಿಂದೆ ತಿಳಿಸಿದ್ದರೆಂದು ವಿದ್ಯಾರ್ಥಿ ವೈದ್ಯರಿಗೆ ಮಾಹಿತಿ ನೀಡಿದರು. ಅಲ್ಲದೆ ಚಿಕಿತ್ಸೆಯ ವೆಚ್ಚದ ಬಗ್ಗೆಯೂ ಆತಂಕ ವ್ಯಕ್ತಪಡಿಸಿದರು. ಇದರಿಂದ ಕುಟುಂಬದವರಿಗೆ ಧೈರ್ಯ ತುಂಬಿದ ಮೂವರು ವೈದ್ಯರು ರೈಲಿನಲ್ಲೇ ಸಾಧ್ಯವಾದಷ್ಟು ಸುರಕ್ಷಿತ ವಾತಾವರಣ ನಿರ್ಮಿಸಿ ತುರ್ತು ಹೆರಿಗೆಗೆ ಸಿದ್ಧತೆ ನಡೆಸಿದರು.

ಹೆರಿಗೆಯ ವೇಳೆ ಮಗುವಿನ ಕುತ್ತಿಗೆಯ ಸುತ್ತ ಹೊಕ್ಕುಳ ಬಳ್ಳಿ (ನುಕಲ್ ಕಾರ್ಡ್) ಸುತ್ತಿಕೊಂಡಿರುವುದು ಪತ್ತೆಯಾಯಿತು. ಡಾ. ರಶ್ಮಿ ಬೀಳಗಿ ಅವರು ಅತ್ಯಂತ ಎಚ್ಚರಿಕೆಯಿಂದ ಹೊಕ್ಕುಳ ಬಳ್ಳಿಯನ್ನು ಸರಿಪಡಿಸಿದರೆ, ಡಾ. ಶಾಹಿನ್ ಎಂ ಮತ್ತು ಡಾ. ಲತಾಶ್ರೀ ಎನ್ ಅವರು ಹೆರಿಗೆ ಪ್ರಕ್ರಿಯೆಯಲ್ಲಿ ಸಹಕರಿಸಿ ಮಗುವನ್ನು ಸುರಕ್ಷಿತವಾಗಿ ಹೊರತಂದರು.

ಜನನದ ಬಳಿಕ ನವಜಾತ ಶಿಶುವಿಗೆ ಸ್ವಲ್ಪ ಸಮಯ ಪುನರುಜ್ಜೀವನ (ರೆಸಸಿಟೇಶನ್) ನೀಡಲಾಗಿದ್ದು, ಬಳಿಕ ಮಗು ಆರೋಗ್ಯಕರವಾಗಿ ಅಳುವ ಮೂಲಕ ಉತ್ತಮ ಪ್ರತಿಕ್ರಿಯೆ ನೀಡಿತು. ನಂತರ ಸೀಮಿತ ವೈದ್ಯಕೀಯ ಸೌಲಭ್ಯಗಳ ನಡುವೆಯೂ ಹೊಕ್ಕುಳ ಬಳ್ಳಿಯನ್ನು ಸುರಕ್ಷಿತವಾಗಿ ಕತ್ತರಿಸಿ ಕಟ್ಟಿ, ತಾಯಿ ಮತ್ತು ಮಗುವಿನ ನಡುವೆ ತಕ್ಷಣವೇ ಚರ್ಮ-ಚರ್ಮದ ಸ್ಪರ್ಶ (ಸ್ಕಿನ್-ಟು-ಸ್ಕಿನ್ ಕಾಂಟ್ಯಾಕ್ಟ್) ಕಲ್ಪಿಸಲಾಯಿತು.

ಈ ನಡುವೆ ಪ್ಲಸೆಂಟಾ ಹೊರಬರಲು ವಿಳಂಬವಾದ ಸಂದರ್ಭವನ್ನೂ ವೈದ್ಯ ವಿದ್ಯಾರ್ಥಿಗಳು ಯಶಸ್ವಿಯಾಗಿ ನಿರ್ವಹಿಸಿದರು. ಬಳಿಕ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಮುಂದಿನ ನಿಲ್ದಾಣದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಮಾಡಿ ತಾಯಿ ಹಾಗೂ ನವಜಾತ ಶಿಶುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು.

 

Related Articles

Back to top button
error: Content is protected !!