ರಾಜಕೀಯ

ಕೆಂಪೇಗೌಡ ಜಯಂತಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಗದ್ದಲ- ಶಾಸಕ ಪ್ರದೀಪ್‌ ಈಶ್ವ‌ರ್ ಹೈಡ್ರಾಮಾ!

Views: 39

ಕನ್ನಡ ಕರಾವಳಿ ಸುದ್ದಿ: ಶಾಸಕ ಪ್ರದೀಪ್ ಈಶ್ವರ್ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವಿನ ಕಿತ್ತಾಟ ಇದೀಗ ಸಾರ್ವಜನಿಕ ಕಾರ್ಯಕ್ರಮಗಳಲ್ಲಿಯೂ ಮುಂದುವ ರಿದಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆಯೋಜಿಸಿದ್ದ ಕೆಂಪೇಗೌಡ ಜಯಂತಿಯಲ್ಲಿ ಜೆಡಿಎಸ್ ಕಾರ್ಯಕರ್ತರು ಗದ್ದಲ-ಗಲಾಟೆ ನಡೆಸುವ ಮೂಲಕ ಭಾರಿ ಹೈಡ್ರಾಮಾ ಸೃಷ್ಟಿಸಿದ್ದಾರೆ.

ಶನಿವಾರ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆಯೋಜಿಸಿದ್ದ ಕೆಂಪೇಗೌಡ ಜಯಂತಿಯಲ್ಲಿ ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಭಾಗವಹಿಸಿದ್ದರು. ಆದರೆ ಕುಮಾರಸ್ವಾಮಿ ವಿರುದ್ಧ ಮಾತನಾಡಿರುವ ಪ್ರದೀಪ್ ಈಶ್ವರ್ ಕಾರ್ಯಕ್ರಮದಿಂದ ಹೊರನಡೆಯಬೇಕು ಎಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ವೇದಿಕೆ ಬಳಿಕ ಗಲಾಟೆ ನಡೆಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು.

ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು. ಈ ವೇಳೆ ಲಘು ಲಾಠಿ ಪ್ರಹಾರ ನಡೆಸಲಾಗಿದೆ ಎನ್ನಲಾಗಿದ್ದು, ಕೆಲವರನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು. ಆದರೆ ಕಾರ್ಯಕ್ರಮದ ಬಳಿಕ ಶಾಸಕ ಪ್ರದೀಪ್ ಈಶ್ವರ್ ಅವರು ವಾಹನದಲ್ಲಿ ತೆರಳುತ್ತಿದ್ದ ವೇಳೆ ಕೆಲವರು ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಕಾರಿನತ್ತ ಚಪ್ಪಲಿ ಎಸೆದ ಘಟನೆ ನಡೆದಿದೆ. ಚಪ್ಪಲಿ ಎಸೆದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾದಾಗ ಕೆಲ ಆಕ್ರೋಶಿತರು ವಿರೋಧ ವ್ಯಕ್ತಪಡಿಸಿದ್ದು, ಮತ್ತೆ ತಳ್ಳಾಟ ನೂಕಾಟ ನಡೆಯಿತು ಎಂದು ತಿಳಿದುಬಂದಿದೆ.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಸ್ವಾಮೀಜಿ ಆಕ್ರೋಶಿತರನ್ನು ಸಮಾಧಾನಪಡಿಸುವ ಯತ್ನ ನಡೆಸಿದ್ರು. ಇಷ್ಟಾದ್ರೂ ಗಲಾಟೆ ಮುಂದುವರೆದಿದೆ. ಕಾರ್ಯಕ್ರಮದಿಂದ ತಮ್ಮ ಬೆಂಬಲಿಗರೊಂದಿಗೆ ಹೊರ ನಡೆದ ಪ್ರದೀಪ್ ಈಶ್ವರ್ ಕಾರಿನ ಮೇಲೆ ನಿಂತು ಭುಜ ತಟ್ಟಿದ್ದು, ಮೀಸೆ ತಿರುವಿ ಎದೆ ತಟ್ಟಿಕೊಂಡು ಕೂದಲು ಕಿತ್ತು ಗಾಳಿಗೆ ಎಸೆದು ವಿರೋಧಿಗಳಿಗೆ ತೊಡೆ ತಟ್ಟಿ ಪಂಥಾಹ್ವಾನ ನೀಡಿ ಹೈಡ್ರಾಮಾ ಸೃಷ್ಟಿ ಆಯ್ತು

ಏನಿದು ಗಲಾಟೆ?

ಎರಡು ದಿನದ ಹಿಂದೆ ಬೆಂಗಳೂರಿನಲ್ಲಿ ಶಾಸಕ ಪ್ರದೀಪ್ ಈಶ್ವರ್ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ, ಕುಮಾರಸ್ವಾಮಿ ಅವರ ವಿರುದ್ಧ ಹರಿಹಾಯ್ದಿದ್ದರು. ಕುಮಾರಸ್ವಾಮಿ ಅವರ ಬಳಿ 10ರಿಂದ 15 ಕೋಟಿ ಬೆಲೆಯ ವಾಚುಗಳಿವೆ ಎಂದು ಟೀಕಿಸಿದ್ದರು. ಪ್ರದೀಪ್ ಈಶ್ವರ್ ಅವರ ಹೇಳಿಕೆಗೆ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದು, ‘ನಾನು ಕಟ್ಟುವುದು ಎಚ್ ಎಂಟಿ ಕಂಪನಿಯ ಅಂಬೇಡ್ಕರ್ ಭಾವಚಿತ್ರವಿರುವ ವಾಚ್’ ಎಂದು ತಿರುಗೇಟು ನೀಡಿದ್ದರು.

Related Articles

Back to top button
error: Content is protected !!