ದೇವರ ದರ್ಶನ ಮುಗಿಸಿ ಬರುತ್ತಿದ್ದ ವೇಳೆ ತೆರೆದ ಬಾವಿಗೆ ಬಿದ್ದ ಪಿಕಪ್ ವಾಹನ: 8 ಮಂದಿ ಸಾವು
Views: 71
ಕನ್ನಡ ಕರಾವಳಿ ಸುದ್ದಿ: ಪಿಕಪ್ ವಾಹನವೊಂದು ರಸ್ತೆಬದಿಯಲ್ಲಿನ ತೆರೆದ ಬಾವಿಯೊಂದಕ್ಕೆ ಉರುಳಿ ಬಿದ್ದು 8 ಜನರು ಸಾವನ್ನಪ್ಪಿರುವ ಘಟನೆ ಸೊಲ್ಲಾಪುರ ಜಿಲ್ಲೆಯ ಮಲ್ಶಿರಾಸ್ ತಾಲೂಕಿನ ಮಹಾಸ್ವದ್-ಪಂಢರಾಪುರ ರಸ್ತೆಯಲ್ಲಿ ಭಾನುವಾರ ಸಂಭವಿಸಿದೆ.
ಪ್ರಾಥಮಿಕ ವರದಿಗಳ ಪ್ರಕಾರ 16 ಮಂದಿ ಭಕ್ತರು ದೇವಾಲಯಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ. ಮೃತರೆಲ್ಲರೂ ಪಂಢರಾಪುರ ತಾಲೂಕಿನ ರಂಜನಿ ಗ್ರಾಮದವರು ಎಂದು ಎಂದು ತಿಳಿದು ಬಂದಿದೆ.
ಮಹಾಸ್ವದ್‌ನಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ಹಿಂತಿರುಗುತ್ತಿದ್ದಾಗ ತಂಡುಲ್ವಾಡಿ ಎಂಬಲ್ಲಿ ಅಪಘಾತ ಸಂಭವಿಸಿದೆ.
ಸಾಗರ್ ಚೌಗುಲೆ ಎಂಬುವರು ತಮ್ಮ ಕುಟುಂಬ ಸದಸ್ಯರನ್ನು ಪಿಕಪ್ ವಾಹನದಲ್ಲಿ ದೇಗುಲಕ್ಕೆ ಕರೆದುಕೊಂಡು ಹೋಗಿದ್ದರು. ಮೃತಪಟ್ಟವರಲ್ಲಿ ಇಬ್ಬರು ಮಕ್ಕಳೂ ಇದ್ದಾರೆ. ಬಾವಿಗೆ ಬಿದ್ದಿದ್ದ ಇತರರನ್ನು ರಕ್ಷಣೆ ಮಾಡಲಾಗಿದೆ. ಮೃತದೇಹಗಳನ್ನು ಪಂಢರಾಪುರದ ಉಪ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಉಪ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸುಡ್ಕೆ ಅವರ ಪ್ರಾಥಮಿಕ ಮಾಹಿತಿಯ ಪ್ರಕಾರ, ಪಿಕಪ್ ವಾಹನದಲ್ಲಿ ಒಟ್ಟು 16 ಜನರಿದ್ದರು. ಅವರಲ್ಲಿ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರಲ್ಲಿ ಆರು ತಿಂಗಳ ಹೆಣ್ಣು ಮಗು ಮತ್ತು ಎಂಟು ವರ್ಷದ ಬಾಲಕಿಯೂ ಸೇರಿದ್ದಾರೆ.






