ಶಿವಮೊಗ್ಗ: ಮನೆಯ ಮಾಲಕಿ, ಸಾಕು ನಾಯಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ
Views: 63
ಕನ್ನಡ ಕರಾವಳಿ ಸುದ್ದಿ: ಶಿವಮೊಗ್ಗ ರವೀಂದ್ರನಗರದ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಹಾಗೂ ಅವರ ಸಾಕು ನಾಯಿಯ ಶವ ಪತ್ತೆಯಾಗಿದೆ.
ರವೀಂದ್ರ ನಗರದ ಮೊದಲನೇ ತಿರುವಿನಲ್ಲಿನ ಮನೆಯಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಸ್ಥಳೀಯರು ಜಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಬಂದು ಮನೆ ಬಾಗಿಲು ಒಡೆದು ನೋಡಿದಾಗ ಮನೆಯ ಮಾಲಕಿಯ ಮೃತದೇಹ ಹಾಗೂ ಅವರ ಸಾಕು ನಾಯಿಯ ಕಳೇಬರ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿವೆ.
ಮೃತರನ್ನು ಜನವಾರ್ತೆ ಪತ್ರಿಕೆಯ ಸಂಪಾದಕರಾಗಿದ್ದ ನಾಗರಾಜ್ ಅವರ ಪತ್ನಿ ಪ್ರಭಾವತಿ(60) ಎಂದು ಗುರುತಿಸಲಾಗಿದೆ. ಪ್ರಭಾವತಿ ಅವರು ದೇವರ ಕೋಣೆಯಲ್ಲಿ ಸಾವನ್ನಪ್ಪಿದರೆ, ನಾಯಿ ಹಾಲ್ನಲ್ಲಿ ಸಾವನ್ನಪ್ಪಿದೆ. ಮೃತರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಮದುವೆಯಾಗಿ ಬೇರೆ ಇದ್ದಾರೆ. ನೆರೆಹೊರೆಯವರು ದುರ್ವಾಸನೆ ಬರುತ್ತಿದೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರಭಾವತಿ ಅವರ ಮೃತದೇಹವನ್ನು ಶವಗಾರಕ್ಕೆ ರವಾನಿಸಲಾಗಿದೆ. ನಾಗರಾಜ್ ಅವರು ಕೆಲ ವರ್ಷಗಳ ಹಿಂದೆ ನಿಧನರಾಗಿದ್ದರು. ಪ್ರಭಾವತಿ ಪ್ರತಿ ದಿನ ತಮ್ಮ ಮನೆ ಎದುರಿನ ಕ್ಯಾಂಟೀನ್ನಲ್ಲಿ ತಿಂಡಿ ತೆಗೆದುಕೊಳ್ಳುತ್ತಿದ್ದರು. ಕೆಲ ದಿನಗಳಿಂದ ಅವರು ಕ್ಯಾಂಟೀನ್ ಕಡೆ ಹೋಗಿಲ್ಲ ಎನ್ನಲಾಗಿದೆ.






