ಯುವಜನ

ಕುಂದಾಪುರ: ಬೇಳೂರು ಸಮೀಪ ಹೊಳೆಯಲ್ಲಿ ಈಜಲು ತೆರಳಿದ್ದ ಕಾಲೇಜು ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ನಾಪತ್ತೆ 

Views: 160

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಬೇಳೂರು ಗ್ರಾಮ ಪಂಚಾಯತ್ ಸುಳಿಗುಂಡಿ ಹಿರೇಹೊಳೆಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಜೂ.13ರ ಶನಿವಾರ ಸಂಜೆ  ಸಂಭವಿಸಿದೆ.

ನಾಪತ್ತೆಯಾದ ವಿದ್ಯಾರ್ಥಿ ಗರಿಕೆಮಠದ ನಿವಾಸಿ ನಾಗರಾಜ್ ಹಾಗೂ ಶಿವಗಾಮಿ ದಂಪತಿಗಳ ಪುತ್ರ ಸಾಮರಾಜ್ (21) ಎಂದು ಗುರುತಿಸಲಾಗಿದೆ.

ಈತ ಸ್ಥಳೀಯ ಇ.ಸಿ.ಆ‌ರ್ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದಾನೆ.

ಘಟನೆಯ ವಿವರ: ಶನಿವಾರ ಸಂಜೆ ಸಾಮರಾಜ್ ತನ್ನ ಕಾಲೇಜಿನ ಎಂಟು ಮಂದಿ ಸ್ನೇಹಿತರೊಂದಿಗೆ ಸೇರಿ ಬೇಳೂರು ಕೋಣಬಗೆ ರೈಲ್ವೆ ಬ್ರಿಡ್ಜ್‌ ನ ಕೆಳಗಡೆ ಇರುವ ಚಮ್ರಾಡಿಯ ಸುಳಿಗುಂಡಿ ಹಿರೇಹೊಳೆಗೆ ಈಜಲೆಂದು ತೆರಳಿದ್ದನು. ಈ ಸಂದರ್ಭದಲ್ಲಿ ಸಾಮರಾಜ್ ಸೇರಿದಂತೆ ನಾಲ್ವರು ಸ್ನೇಹಿತರು ನದಿಗೆ ಇಳಿಯಲು ಮುಂದಾಗಿದ್ದಾರೆ. ಆದರೆ ದುರದೃಷ್ಟವಶಾತ್ ನದಿಗೆ ಇಳಿಯುವಾಗ ಸಾಮರಾಜ್ ಕಾಲುಜಾರಿ ಆಳವಾದ ನೀರಿಗೆ ಬಿದ್ದಿದ್ದಾನೆ. ಸಾಮರಾಜ್ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ತಕ್ಷಣ ಉಳಿದ ಸ್ನೇಹಿತರು ಆತನನ್ನು ರಕ್ಷಿಸಲು ತೀವ್ರ ಪ್ರಯತ್ನ ನಡೆಸಿದ್ದಾರೆ. ಆದರೆ ನೀರಿನ ರಭಸ ಹೆಚ್ಚಾಗಿದ್ದರಿಂದ ಸಾಮರಾಜ್ ನೀರಿನ ಸೆಳವಿಗೆ ಸಿಲುಕಿ ಕೊಚ್ಚಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ.

ಕುಂದಾಪುರ ಅಗ್ನಿಶಾಮಕ ದಳದ ಸಿಬಂದಿಗಳು ಹಾಗೂ ಸ್ಥಳೀಯ ವಿಪತ್ತು ನಿರ್ವಹಣಾ ಘಟಕದ ಸುಕುಮಾ‌ರ್ ಶೆಟ್ಟಿ ದೇಲಟ್ಟು, ನರಸಿಂಹ ಭೋವಿ ಹಾಗೂ ಬೋಟ್ ಬೆಳಸಿ ನಿರಂತರ 2 ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದರಾದರೂ ವಿದ್ಯಾರ್ಥಿ ಪತ್ತೆಯಾಗಿಲ್ಲ ರವಿವಾರ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಕಾರ್ಯಾಚರಣೆ ನಡೆಸಲಿದ್ದಾರೆ ತಿಳಿಯಲಾಗಿದೆ.

 

Related Articles

Back to top button
error: Content is protected !!