ಶಿರಸಿಯಲ್ಲಿ ಹಾಸ್ಟೆಲ್‌ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿ ಕಿಟಕಿಯಿಂದ ಎಸೆದ 9ನೇ ತರಗತಿ ಬಾಲಕಿ
Views: 100
ಕನ್ನಡ ಕರಾವಳಿ ಸುದ್ದಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಎದೆನಡುಗಿಸುವ ಮತ್ತು ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ.
ಸರಕಾರಿ ಹಾಸ್ಟೆಲ್ ನಲ್ಲಿಉಳಿದುಕೊಂಡಿದ್ದ 15 ವರ್ಷದ 9ನೇ ತರಗತಿ ಅಪ್ರಾಪ್ತೆ ಹಾಸ್ಟೆಲ್‌ನ ಶೌಚಾಲಯದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿ, ಬಳಿಕ ಆ ನವಜಾತ ಶಿಶುವನ್ನು ಕಿಟಕಿಯಿಂದ ಹೊರಗೆ ಎಸೆದಿರುವ ಘಟನೆ ನಡೆದಿದೆ. ಕಿಟಿಕಿಯಿಂದ ಕೆಳಕ್ಕೆ ಬಿದ್ದ ಪರಿಣಾಮ ಶಿಶು ಸ್ಥಳದಲ್ಲೇ ಮೃತಪಟ್ಟಿದೆ.ಶಿರಸಿಯ ಸರಕಾರಿ ಹಾಸ್ಟೆಲ್‌ನಲ್ಲಿ ಈ ಘಟನೆ ಸಂಭವಿಸಿದೆ.
ಬಾಲಕಿಯು ಯಾರಿಗೂ ತಿಳಿಯದಂತೆ ಹಾಸ್ಟೆಲ್‌ನ ಟಾಯ್ಲೆಟ್‌ನಲ್ಲಿ ತಾನೇ ಹೆರಿಗೆ ಮಾಡಿಕೊಂಡಿದ್ದಾಳೆ. ಹೆರಿಗೆಯಾದ ನಂತರ ಗಾಬರಿಗೊಂಡ ಬಾಲಕಿ ಅಥವಾ ವಿಷಯ ಮರೆಮಾಚುವ ಉದ್ದೇಶದಿಂದ ಹಸುಗೂಸನ್ನು ಕಿಟಿಕಿಯಿಂದ ಹೊರಗೆ ಎಸೆದಿದ್ದಾಳೆ ಎನ್ನಲಾಗಿದೆ.
ಈ ವಿಚಾರ ಯಾರಿಗೂ ತಿಳಿದಿರಲಿಲ್ಲ. ಆದರೆ, ಹಾಸ್ಟೆಲ್ ಸಮೀಪ ಕಸ ಆರಿಸುವವರಿಗೆ ಮೃತ ಶಿಶುವಿನ ಶವ ಕಂಡುಬಂದಾಗ ವಿಷಯ ಹೊರಬಂದಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ನಡೆಸಿದಾಗ ಹಾಸ್ಟೆಲ್‌ನಲ್ಲಿದ್ದ ಅಪ್ರಾಪ್ತ ಬಾಲಕಿಯೇ ಈ ಕೃತ್ಯ ಎಸಗಿರುವುದು ಬಯಲಾಗಿದೆ.
ಮಕ್ಕಳ ವಿಷಯ ತಿಳಿಯುತ್ತಿದ್ದಂತೆಯೇ ಶಿರಸಿ ತಹಶೀಲ್ದಾರ್ ಪಟ್ಟರಾಜ್ ಗೌಡ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆರಿಗೆಯಿಂದ ಅಸ್ವಸ್ಥಗೊಂಡಿರುವ ಬಾಲಕಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತೀವ್ರಗೊಳಿಸಿದ್ದಾರೆ. ತನಿಖೆ
ದೊಡ್ಡಪ್ಪನ ಮಗನಿಂದ ಕೃತ್ಯ: ಬಾಲಕಿ ಆರೋಪ
ಪೊಲೀಸರ ವಿಚಾರಣೆಯ ವೇಳೆ ಬಾಲಕಿಯು ನೀಡಿರುವ ಹೇಳಿಕೆ ಮತ್ತಷ್ಟು ಆಘಾತಕಾರಿಯಾಗಿದೆ. ತನ್ನ ದೊಡ್ಡಪ್ಪನ ಮಗನೇ ತನ್ನ ಮೇಲೆ ಅತ್ಯಾಚಾರವೆಸಗಿದ್ದು, ಇದರಿಂದಾಗಿ ತಾನು ಗರ್ಭಧರಿಸಿದ್ದಾಗಿ ಬಾಲಕಿ ಆರೋಪಿಸಿದ್ದಾಳೆ.






