ಧಾರಾವಾಡ ಕೇಂದ್ರ ಕಾರಾಗೃಹದ ಜೈಲರ್ ಆತ್ಮಹತ್ಯೆ:ಮೇಲಾಧಿಕಾರಿಗಳ ವಿರುದ್ಧ ಆರೋಪ
Views: 30
ಕನ್ನಡ ಕರಾವಳಿ ಸುದ್ದಿ : ಕೇಂದ್ರ ಕಾರಾಗೃಹದ ಜೈಲರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಸಿದ್ದರಾಮಪ್ಪ ವಡ್ಡರ (37) ಎಂದು ಗುರುತಿಸಲಾಗಿದೆ.
ಸಿದ್ದರಾಮಪ್ಪ ವಡ್ಡರ ಅವರನ್ನು ಕಳೆದ ಕೆಲ ತಿಂಗಳ ಹಿಂದೆ ಅಮಾನತ್ತು ಮಾಡಿ, ಆಡಳಿತಾತ್ಮಕ ಕಾರಣದಿಂದ ಮೈಸೂರಿಗೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆ ಮಾಡಿದರೂ ಅವರು ಮಾತ್ರ ಮೈಸೂರು ಕಾರಾಗೃಹಕ್ಕೆ ಹೋಗಿ ರಿಪೋರ್ಟ್ ಮಾಡಿಕೊಂಡಿರಲಿಲ್ಲ.
ಮಾನಸಿಕವಾಗಿ ಜರ್ಜರಿತರಾಗಿದ್ದ ಸಿದ್ದರಾಮಪ್ಪ ಅವರು ಧಾರವಾಡದ ಹೊಸ ಬಸ್ ನಿಲ್ದಾಣದ ಬಳಿಯ ವಸತಿಗೃಹದಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯವರು ಕರೆ ಮಾಡಿದಾಗ ಸಿದ್ದರಾಮಪ್ಪ ಫೋನ್ ರಿಸಿವ್ ಮಾಡಿಲ್ಲ. ಹೀಗಾಗಿ ಪಕ್ಕದ ಮನೆಯವರು ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು, ತಕ್ಷಣ ಅವರ ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ್ದಾರೆ.
ಜೈಲಿಗೆ ಹಾಕುತ್ತಾರೆ ಎಂದು ಡಿಜಿಪಿ ಅವರು ಸಿದ್ದರಾಮಪ್ಪ ಅವರಿಗೆ ಹೆದರಿಸಿದ್ದು, ಇದರಿಂದ ಮಾನಸಿಕವಾಗಿ ನೊಂದ ಸಿದ್ದರಾಮಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.






