ಉಚಿತ ವಿದ್ಯುತ್, ಗ್ರಹಲಕ್ಷ್ಮೀ ಯೋಜನೆಗಳಿಗೆ ಮತ್ತೊಮ್ಮೆ ಅರ್ಜಿ ಪಡೆಯಲು ಅಧಿಕಾರಿಗಳಿಗೆ ಸೂಚನೆ
Views: 98
ಕನ್ನಡ ಕರಾವಳಿ ಸುದ್ದಿ: ಗೃಹಲಕ್ಷ್ಮೀ ಯೋಜನೆಯ ನೂರಾರು ಕೋಟಿ ರೂ. ಅನರ್ಹರ ಖಾತೆಗೆ ಹೋಗಿದೆ. ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಮರು ಅರ್ಜಿ ಆಹ್ವಾನಿಸುತ್ತಿದ್ದು, ಇದೇ ರೀತಿ ‘ಗೃಹ ಜ್ಯೋತಿ’ ದುರ್ಬಳಕೆ ತಡೆಯಲು ಮತ್ತೊಮ್ಮೆ ಅರ್ಜಿ ಪಡೆಯುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿ ಗಳು, ಜಿಪಂ ಸಿಇಓಗಳು, ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ರಾಜ್ಯ ಮಟ್ಟದ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಗ್ಯಾರಂಟಿಗಳ ದುರ್ಬಳಕೆ ತಡೆಯುವ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ಪಂಚ ಗ್ಯಾರಂಟಿಗಳಲ್ಲೂ ದುರ್ಬಳಕೆ, ಸೋರಿಕೆ ತಡೆಯಬೇಕು. ಅರ್ಹರಿಗೆ ಮಾತ್ರ ಯೋಜನೆ ಲಾಭ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಗೃಹಲಕ್ಷ್ಮೀ ಹಾಗೂ ಗೃಹಜ್ಯೋತಿ ಎರಡೂ ಯೋಜನೆಗಳಿಗೂ ಹೊಸದಾಗಿ ಅರ್ಜಿ ಪಡೆಯಬೇಕು.ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಬೇಕು ಎಂದು ಸೂಚಿಸಿದ್ದಾರೆ.ಆ ಮೂಲಕ ಮಾಹಿತಿಗಳನ್ನು ಪಡೆಯಲಾಗುವುದು. ಅನರ್ಹರನ್ನು ಕೈ ಬಿಡಲಾಗುವುದು ಎಂದರು.
ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಗೃಹಲಕ್ಷ್ಮೀ ಯೋಜನೆ ಫಲಾನುಭವಿ ಗಳಲ್ಲಿ ಕೆಲವರು ನಿಧನರಾಗಿದ್ದಾರೆ. ಅವರ ಹೆಸರಲ್ಲಿ ಬೇರೆಯವರು 100 ಕೋಟಿ ರೂ.ಗೂ ಹೆಚ್ಚು ಹಣ ಪಡೆದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪುತ್ತಿದೆಯೇ, ಇಲ್ಲವೇ ಎಂದು ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಿದೆ.
ಮನೆ ಮನೆ ಹೋಗಿ ಭೇಟಿ ನೀಡಿ ಅರ್ಜಿ ಕೊಟ್ಟು ಮಾಹಿತಿ ಕೇಳಿದ್ದೇವೆ. ಇನ್ನು ಗೃಹ ಜ್ಯೋತಿ ಯೋಜನೆಯಡಿ ಸದ್ಯ 1.64 ಲಕ್ಷ ಫಲಾನುಭವಿಗಳಿದ್ದಾರೆ. ಅವರೇ ಫಲಾನುಭವಿಗಳಾ, ಅರ್ಹರಾ?. ಹಲವೆಡೆ ಗೃಹ ಜ್ಯೋತಿಯಡಿ ಗೃಹ ಬಳಕೆ ಜೊತೆಗೆ ವಾಣಿಜ್ಯ ಉದ್ದೇಶಕ್ಕೂ ಬಳಸಲಾಗುತ್ತಿದೆ. ಹೀಗಾಗಿ ನಾವು ಅರ್ಜಿಯನ್ನು ಕೊಡಲು ಆರಂಭ ಮಾಡುತ್ತೇವೆ. ಮಾಹಿತಿ ಪಡೆದು ಅರ್ಹರಿಗೆ ಮಾತ್ರ ಯೋಜನೆ ತಲುಪುವಂತೆ ಮಾಡುತ್ತೇವೆ ಎಂದರು.






