ರಾಜಕೀಯ

ಸಿಎಂ‌ ಡಿಕೆಶಿ ಸಚಿವ ಸಂಪುಟದಲ್ಲಿ 20 ಖಾತೆಗಳಿಗೆ 50ಕ್ಕೂ ಅಧಿಕ ಆಕಾಂಕ್ಷಿಗಳಿಂದ ತೀವ್ರ ಲಾಬಿ

Views: 31

ಕನ್ನಡ ಕರಾವಳಿ ಸುದ್ದಿ: ಸಿಎಂ‌ ಡಿ.ಕೆ.ಶಿವಕುಮಾರ್ ನೇತೃತ್ವದ ನೂತನ ಸರ್ಕಾರದ ಎರಡನೆ ಹಂತದಲ್ಲಿ ಸುಮಾರು 20 ಖಾತೆಗಳಿಗಾಗಿ ಹೊಸಬರು, ಹಿರಿಯ ಶಾಸಕರು, ಮಾಜಿ ಸಚಿವರುಗಳಿಂದ ಪೈಪೋಟಿ, ಲಾಬಿ ತೀವ್ರವಾಗಿದೆ. ಸುಮಾರು 50ಕ್ಕೂ ಅಧಿಕ ಕೈ ಶಾಸಕರುಗಳು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ.

ಜೂನ್ 18ರ ಬಳಿಕ ಉಳಿದಿರುವ ಸುಮಾರು 20 ಖಾತೆಗಳನ್ನೂ ಭರ್ತಿ ಮಾಡಲಾಗುವುದು. ದೆಹಲಿ ಭೇಟಿ ನೀಡಿರುವ ಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಸಚಿವ ಸಂಪುಟ ವಿಸ್ತರಣೆ ಬಗ್ಗೆ ದೆಹಲಿ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ. ಹೀಗಾಗಿ ಸಚಿವ ಸ್ಥಾನ ಆಕಾಕ್ಷಿಗಳಿಂದ ಲಾಬಿ, ಕಸರತ್ತು ಜೋರಾಗಿದೆ.

50ಕ್ಕೂ ಅಧಿಕ ಕೈ ಶಾಸಕರು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಸಂಪುಟ ವಿಸ್ತರಣೆ ವೇಳೆ ಸ್ಥಾನ ಗಿಟ್ಟಿಸಿಕೊಳ್ಳಲು ಸಾಧ್ಯದ ಎಲ್ಲ ಮೂಲಗಳ ಮೂಲಕ ಒತ್ತಡ ಹೇರುತ್ತಿದ್ದಾರೆ. ಒಂದಷ್ಟು ಶಾಸಕರು ದೆಹಲಿಗೆ ತೆರಳಿ ಅಲ್ಲೇ ಬೀಡು ಬಿಟ್ಟು ಲಾಬಿ ನಡೆಸುತ್ತಿದ್ದಾರೆ. ಹೈಕಮಾಂಡ್ ನಾಯಕರ ಮುಂದೆ ಪರೇಡ್ ನಡೆಸುತ್ತಿದ್ದಾರೆ. ಹಿರಿಯ ಶಾಸಕರ ಒತ್ತಡದ ನಡುವೆ ಬಹಳಷ್ಟು ಹೊಸ ಶಾಸಕರೂ ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ.

ಹಿರಿಯ ಶಾಸಕರುಗಳೂ ಡಿಕೆಶಿ ಸಚಿವ ಸಂಪುಟದಲ್ಲಿ ಸ್ಥಾನ ಗಳಿಸಲು ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಒಂದಷ್ಟು ಮಂದಿ ಜಾತಿವಾರು ಲೆಕ್ಕಾಚಾರದೊಂದಿಗೆ ಲಾಬಿ ನಡೆಸುತ್ತಿದ್ದರೆ, ಇನ್ನೊಂದಷ್ಟು ಮಂದಿ ಪ್ರಾದೇಶಿಕವಾರು, ಮತ್ತೊಂದಷ್ಟು ಮಂದಿ ಹಿರಿತನದ ಆಧಾರದಲ್ಲಿ ಸಚಿವ ಸ್ಥಾನಕ್ಕಾಗಿ ಒತ್ತಡ ಹೇರುತ್ತಿದ್ದಾರೆ. ಸಚಿವಾಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು, ಸಿಎಂ ಡಿ.ಕೆ.ಶಿವಕುಮಾರ್ಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಹೈಕಮಾಂಡ್ ಜೊತೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುತ್ತಿದ್ದಾರೆ.

ಶಾಸಕರಾಗಿರುವ ರಿಜ್ವಾನ್ ಅರ್ಷದ್, ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ, ಕೆ.ಷಡಕ್ಷರಿ, ಎಸ್.ಎಸ್.ಮಲ್ಲಿಕಾರ್ಜುನ, ಅಶೋಕ್ ಪಟ್ಟಣ್, ಬೇಳೂರು ಗೋಪಾಲಕೃಷ್ಣ, ಟಿ.ಬಿ. ಜಯಚಂದ್ರ, ಹೆಚ್.ಕೆ.ಪಾಟೀಲ್ ಸೇರಿದಂತೆ ಹಲವು ನಾಯಕರು ದೆಹಲಿಯಲ್ಲೇ ಠಿಕಾಣಿ ಹೂಡಿದ್ದಾರೆ.

ಹೇಗಾದರೂ ಮಾಡಿ ಈ ಬಾರಿ ಸಚಿವ ಸಂಪುಟದಲ್ಲಿ ಅವಕಾಶ ಮಾಡಿಕೊಡಿ ಅಂತ ಮನವಿ ಮಾಡುತ್ತಿದ್ದಾರೆ. ಸಿಎಂ, ಡಿಸಿಎಂ, ಕೆಪಿಸಿಸಿ ಅಧ್ಯಕ್ಷರು ದೆಹಲಿಯಲ್ಲೇ ಇರೋದ್ರಿಂದ ದೆಹಲಿಯಲ್ಲೇ ವರಿಷ್ಠರ ಬಳಿ ಸಚಿವ ಸ್ಥಾನಕ್ಕಾಗಿ ಮೊರೆ ಇಡಲು ಮುಂದಾಗಿದ್ದಾರೆ. ಈ ಶಾಸಕರು ಹೈಕಮಾಂಡ್ ಮೇಲೆ ಮತ್ತಷ್ಟು ಒತ್ತಡ ತರುವ ಪ್ರಯತ್ನ ನಡೆಸಲಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಮೂಲಕವೂ ವರಿಷ್ಠರ ಮೇಲೆ ಒತ್ತಡ ತರಲು ಯತ್ನಿಸುತ್ತಿದ್ದಾರೆ.

ಇತ್ತ ದಲಿತ ಕೋಟಾದಲ್ಲಿ ಸಚಿವ ಸ್ಥಾನ ಕೊಡಿಸುವಂತೆ ಪ್ರಸಾದ್ ಅಬ್ಬಯ್ಯ ಹಾಗೂ ಬಂಗಾರಪೇಟೆ ನಾರಾಯಣಸ್ವಾಮಿ, ರುದ್ರಪ್ಪ ಲಮಾಣಿಯವರು ತೀವ್ರ ಲಾಬಿ ನಡೆಸುತ್ತಿದ್ದಾರೆ. ಇದರ ಜೊತೆಗೆ ಆರ್.ಬಿ.ತಿಮ್ಮಾಪೂರ, ಶಿವರಾಜ್ ತಂಗಡಗಿ ಮಂತ್ರಿಸ್ಥಾನಕ್ಕಾಗಿ ಒತ್ತಡ ಹಾಕುತ್ತಿದ್ದಾರೆ.

ಮಾಯಕೊಂಡ ಶಾಸಕ ಬಸಂತಪ್ಪ ತಮ್ಮ ಸಚಿವಾಕಾಂಕ್ಷೆಯನ್ನು ಮುಂದಿಟ್ಡಿದ್ದು, ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ. ನಮ್ಮ ಸಮುದಾಯದಿಂದ ಐವರು ಇದ್ದೇವೆ. ಮುನಿಯಪ್ಪ ನಮ್ಮ ಹಿರಿಯ ನಾಯಕರು. ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದವನು. ತಿಮ್ಮಾಪುರ ಬಿಟ್ಟರೆ ನಾನೇ ಹಿರಿಯ. ನಮ್ಮ ಎಡಗೈ ಸಮುದಾಯದಲ್ಲಿ ಹಿರಿಯನಿದ್ದೇನೆ. ಎರಡು ಬಾರಿ ನಿಂತಿದ್ದೆ, ಒಂದು ಬಾರಿ ಸೋತಿದ್ದೆ. ಹೊಸಬರಿಗೆ ಅವಕಾಶ ಕೊಡಿ ಅಂತ ಕೇಳಿದ್ದೆವು. ಹೊಸಬರಿಗೆ ಅವಕಾಶ ಕೊಡಬೇಕು ಎಂದು ಹೇಳಿದ್ದಾರೆ.

ಇದೇ ತಿಂಗಳ 20ರ ನಂತರ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ. ನಾನು ನನ್ನ ಬೇಡಿಕೆಯನ್ನು ಕೂಡ ಹೇಳಿದ್ದೇನೆ. ರಾಜ್ಯದ ಎಲ್ಲ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದೇನೆ. ಈ ಬಾರಿ ಖಂಡಿತವಾಗಿ ಸಚಿವ ಸ್ಥಾನ ಸಿಗುತ್ತೆ ಅನ್ನೋ ಭರವಸೆ ಇದೆ. ಮುಂಬೈ ಕರ್ನಾಟಕ ಭಾಗಕ್ಕೆ ಪ್ರಾತಿನಿಧ್ಯತೆ ಇಲ್ಲ. ಅದು ಬಿಜೆಪಿ ಪ್ರಭಾವ ಇರುವ ಭಾಗ, ಹೀಗಾಗಿ ಅಲ್ಲಿಗೆ ಒಂದು ಸ್ಥಾನ ನೀಡಬೇಕು. ಪ್ರತಿ ಬಾರಿಯೂ ಕೂಡ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ. ಅಲ್ಲಿ ಹೆಚ್ಚಿನ ಪ್ರಾತಿನಿಧ್ಯತೆ ಸಿಗುವಂತಾಗಬೇಕು. ಹಾಗಾಗೀ ನಾವು ಒಂದು ಬೇಡಿಕೆ ಇಟ್ಟಿದ್ದೇವೆ. ಎಲ್ಲವೂ ಒಂದೇ ಕಡೆ ಕೇಂದ್ರೀಕೃತ ಆಗಬಾರದು. ಎಲ್ಲದಕ್ಕೂ ಪ್ರಾತಿನಿಧ್ಯತೆ ಸಿಗುವಂತಾಗಬೇಕ ಹೈಕಮಾಂಡ್ ನಾಯಕರ ಮೇಲೆ ವಿಶ್ವಾಸವಿದೆ. ಹೊಸಬರಿಗೆ ಅವಕಾಶ ಸಿಗುತ್ತೆ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ತಿಳಿಸಿದ್ದಾರೆ.

ಸಿದ್ದರಾಮಯ್ಯ ಸಂಪುಟದಲ್ಲಿದ್ದ ಸಚಿವರುಗಳು ಇದೀಗ ಡಿಕೆಶಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ತೀವ್ರ ಲಾಬಿ ನಡೆಸುತ್ತಿದ್ದಾರೆ. ಹೈಕಮಾಂಡ್ ಮೂಲಕ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಹೆಚ್.ಕೆ.ಪಾಟೀಲ್, ಜಮೀರ್ ಅಹ್ಮದ್ ಖಾನ್, ಲಕ್ಷ್ಮೀ ಹೆಬ್ಬಾಳ್ಕರ್, ದಿನೇಶ್ ಗುಂಡೂರಾವ್, ಸಂತೋಷ್ ಲಾಡ್, ಹೆಚ್.ಸಿ.ಮಹದೇವಪ್ಪ, ಆರ್.ಬಿ.ತಿಮ್ಮಾಪೂರ, ಮಧು ಬಂಗಾರಪ್ಪ, ಶಿವರಾಜ್ ತಂಗಡಗಿ, ಎಸ್.ಎಸ್.ಮಲ್ಲಿಕಾರ್ಜುನ, ಎಂ.ಸಿ.ಸುಧಾಕರ್ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ.

ಮಾಜಿ ಸಚಿವ ದಿನೇಶ್ ಗುಂಡೂರಾವ್ ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ನಾನು ಮೂರು ವರ್ಷ ಆರೋಗ್ಯ ಇಲಾಖೆಯಲ್ಲಿ ಪಾರದರ್ಶಕವಾಗಿ ಕೆಲಸ ಮಾಡಿದ್ದೆ. ಇಲಾಖೆಯಲ್ಲಿ ಹೊಸ ಬದಲಾವಣೆಗಳನ್ನು ತಂದಿದ್ದೆ. ಎಲ್ಲರಿಗೂ ನನ್ನ‌ ಕೆಲಸದ ಬಗ್ಗೆ ಮೆಚ್ಚುಗೆಯೂ ಇದೆ. ನನಗೆ ಖಾತೆ ಕೊಡುವುದು ಪಕ್ಷದ ವರಿಷ್ಠರಿಗೆ ಸೇರಿದ್ದು. ಜಾತಿ ಹೆಸರಿನಲ್ಲಿ ಸಚಿವ ಸ್ಥಾನ ಸಿಗಬೇಕು ಅಂತಾ ಏನಿಲ್ಲ. ನಮ್ಮ ಅರ್ಹತೆ, ಕೆಲಸ ಕಾರ್ಯಗಳ ಮೇಲೆ ಗುರುತಿಸಬೇಕು. ಅರ್ಹತೆಗೆ ಜಾತಿಯೊಂದೇ ಮಾನದಂಡವಾಗಬಾರದು. ಖಾತೆ ಬಗ್ಗೆ ಹೆಚ್ಚಿಗೆ ಏನನ್ನೂ ಹೇಳೋದಿಲ್ಲ ಎಂದು ತಿಳಿಸಿದ್ದಾರೆ.

ಮುಸ್ಲಿಂ ಶಾಸಕರಿಂದ ತೀವ್ರ ಪೈಪೋಟಿ: ಡಿಕೆಶಿ ಉಳಿದಿರುವ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಮುಸ್ಲಿಂ ಶಾಸಕರೂ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಸಂಪುಟ ಸಚನೆ ವೇಳೆ ಯು.ಟಿ.ಖಾದರ್ಗೆ ಸ್ಥಾನ ನೀಡಲಾಗಿದೆ. ಇನ್ನೂ ಮೂರು ಸಚಿವ ಸ್ಥಾನ ಮುಸ್ಲಿಂ ಸಮುದಾಯಕ್ಕೆ ಸಿಗುವ ನಿರೀಕ್ಷೆಯಲ್ಲಿ ಮುಸ್ಲಿಂ ನಾಯಕರದ್ದಾಗಿದೆ. ಹೀಗಾಗಿ ತನ್ವೀರ್ ಸೇಠ್, ಎಂಎಲ್ಸಿ ಸಲೀಂ ಅಹಮ್ಮದ್ ರೇಸ್ನಲ್ಲಿ ಮುಂಚೂಣಿಯಲ್ಲಿದ್ದರೆ, ರಿಜ್ವಾನ್ ಅರ್ಷದ್, ಎನ್.ಎ.ಹ್ಯಾರೀಸ್, ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಮಂತ್ರಿ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸುತ್ತಿದ್ದಾರೆ.

ಹೊಸಬರು, ಯುವ ಮುಖಗಳಿಂದ ತೀವ್ರ ಒತ್ತಡ: ಈ ಬಾರಿ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಲು ಹೈಕಮಾಂಡ್ ಹಾಗೂ ಸಿಎಂ ಡಿಕೆಶಿ ಒಲವು ಹೊಂದಿದ್ದಾರೆ ಎನ್ನಲಾಗುತ್ತಿದೆ. ಯುವ ಶಾಸಕರಿಗೆ ಉಳಿದಿರುವ ಖಾತೆಗಳಲ್ಲಿ ಬಹುಪಾಲು ನೀಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಎರಡು ಮೂರು ಬಾರಿ ಶಾಸಕರಾಗಿರುವವರು ಹಾಗೂ ಮೊದಲ ಬಾರಿಗೆ ಶಾಸಕರಾಗಿರುವವರು ಸಚಿವ ಸ್ಥಾನಕ್ಕಾಗಿ ತೀವ್ರ ಒತ್ತಡ ಹಾಕುತ್ತಿದ್ದಾರೆ.

ಶರತ್ ಬಚ್ಚೇಗೌಡ, ದರ್ಶನ್ ಧ್ರುವ ನಾರಾಯಣ್, ಬಸಂತಪ್ಪ, ಮಾಗಡಿ ಬಾಲಕೃಷ್ಣ, ಕುಣಿಗಲ್ ರಂಗನಾಥ್, ರಮೇಶ್ ಬಂಡಿಸಿದ್ದೇಗೌಡ, ರಾಘವೇಂದ್ರ ಹಿಟ್ನಾಳ್, ಗುಬ್ಬಿ ಶ್ರೀನಿವಾಸ್, ಅಶೋಕ್ ಪಟ್ಟಣ್, ಪೊನ್ನಣ್ಣ, ಸಜಯ್ ಸಿಂಗ್, ಕಂಪ್ಲಿ ಗಣೇಶ್, ಬಸಂತಪ್ಪ, ಲಕ್ಷ್ಮಣ್ ಸವದಿ, ಬೇಳೂರು ಗೋಪಾಲಕೃಷ್ಣ, ಬಸವರಾಜ್ ಶಿವಗಂಗಾ, ಶ್ರೀನಿವಾಸ್ ಮಾನೆ, ನಯನ‌ ಮೋಟಮ್ಮ ಸೇರಿದಂತೆ ಒಂದಷ್ಟು ಮಂದಿ ಡಿಕೆಶಿ ಕ್ಯಾಬಿನೆಟ್ನಲ್ಲಿ ಸ್ಥಾನ ಪಡೆಯಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ.

ಈ ಬಾರಿಯ ಸಂಪುಟ ರಚನೆ‌ಯಲ್ಲಿ ಮೊದಲು, ಎರಡನೇ ಬಾರಿ ಗೆದ್ದ ಐವರಿಗೆ ಅವಕಾಶ ಕೊಡಬೇಕು. ಮೊದಲ ಬಾರಿಗೆ ಗೆದ್ದವರಿಗೆ ಅವಕಾಶ ಮಾಡಿ. ಯುವಕರಿಗೂ ಆದ್ಯತೆ ಕೊಟ್ಟಂತಾಗುತ್ತದೆ ಎಂಬುದು ಹೊಸಬರ ಒತ್ತಾಯವಾಗಿದೆ.‌ ಈಗಾಗಲೇ ಹೊಸಬರು ಹೈಕಮಾಂಡ್, ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಡಿಕೆಶಿ ಮಟ್ಟದಲ್ಲಿ ತೀವ್ರ ಲಾಬಿ ನಡೆಸುತ್ತಿದ್ದಾರೆ.

ಮಹಿಳಾ ಕೋಟಾದ ಕುತೂಹಲ: ಇತ್ತ ಡಿಕೆಶಿ ಸಂಪುಟದಲ್ಲಿ ಮಹಿಳೆಯರಿಗೆ ಕನಿಷ್ಠ ಒಂದು ಮಂತ್ರಿ ಸ್ಥಾನ ಸಿಗುವುದು ಖಚಿತವಾಗಿದೆ. ಈ ಒಂದು ಸ್ಥಾನಕ್ಕೆ ಹಲವು ಹೆಸರುಗಳು ಕೇಳಿ ಬರುತ್ತಿವೆ. ಇದರಲ್ಲಿ ಮುಂಚೂಣಿಯಲ್ಲಿ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಹೆಬ್ಬಾಳ್ಕರ್ ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಉಳಿದಂತೆ ಎಂಎಲ್‌ಸಿ ಉಮಾಶ್ರೀ ಹೆಸರೂ ಮುನ್ನಲೆಗೆ ಬರುತ್ತಿದೆ. ಇನ್ನು ರೂಪಾ ಶಶಿಧರ್, ನಯನಾ ಮೋಟಮ್ಮ ಹೆಸರುಗಳು ಹರಿದಾಡುತ್ತಿವೆ. ಈ ಪೈಕಿ ಹೈಕಮಾಂಡ್ ಯಾರಿಗೆ ಸಚಿವ ಸ್ಥಾನ ನೀಡಲಿದೆ ಎಂಬುದು ಕುತೂಹಲ ಹುಟ್ಟಿಸಿದೆ.

Related Articles

Back to top button
error: Content is protected !!