ಟಿಎಂಸಿ ಕಾಂಗ್ರೆಸ್ ನೊಂದಿಗೆ ವಿಲೀನ..! ಮಮತಾ ಬ್ಯಾನರ್ಜಿಗೆ ಕಾಂಗ್ರೆಸ್‌ನ ಉಪಾಧ್ಯಕ್ಷ ಸ್ಥಾನ?
Views: 50
ಕನ್ನಡ ಕರಾವಳಿ ಸುದ್ದಿ: 2011ರಿಂದ 2026 ಮೇ 4ರವರೆಗೆ ಪಶ್ಚಿಮ ಬಂಗಾಳದಲ್ಲಿ ಸಾಮಾಜ್ಞೆಯಾಗಿ ಮೆರೆದಿದ್ದ ಟಿಎಂಸಿ ಮತ್ತು ಅದರ ಅಧಿನಾಯಕಿ ಮಮತಾ ಬ್ಯಾನರ್ಜಿ ಈಗ ಮಹಾ ಸಂದಿಗ್ಧದ ಸ್ಥಿತಿಯಲ್ಲಿದ್ದಾರೆ. ಸತತ ಮೂರು ದಿನಗಳ ಕಾಲ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜೊತೆಗೆ ಮಮತಾ ಮತ್ತವರ ಅಳಿಯ ಅಭಿಷೇಕ್ ಬ್ಯಾನರ್ಜಿ ಸರಣಿ ಸರಣಿ ಸಭೆ ನಡೆಸಿದ್ದಾರೆ.ಇದು ಟಿಎಂಸಿ ತನ್ನ ಮೂಲಪಕ್ಷ ಕಾಂಗ್ರೆಸ್ ನೊಂದಿಗೆ ವಿಲೀನವಾಗುತ್ತದೆ ಎಂಬ ಸುದ್ದಿಗಳು ಹರಡಲು ಕಾರಣವಾಗಿದೆ.
ಸಾಮಾನ್ಯವಾಗಿ ದಿಲ್ಲಿಯಲ್ಲಿ ಕಾಣಿಸಿಕೊಳ್ಳದ ಮಮತಾ ಸುದೀರ್ಘವಾಗಿ ಚರ್ಚೆ ನಡೆಸುತ್ತಿರುವುದನ್ನು ಗಮನಿಸಿದರೆ, ಮಮತಾ ತಮ್ಮ ಮತ್ತು ತಮ್ಮ ಆಪ್ತರ ರಾಜಕೀಯ ಉಳಿವಿಗಾಗಿ ಟಿಎಂಸಿಯನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಲು ಸಜ್ಜಾಗಿದ್ದಾರೆ. ಇದು ಯಾವುದೇ ಕ್ಷಣದಲ್ಲಿ ಪ್ರಕಟವಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ಋತುಬ್ರತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಂಡಾಯ ಶಾಸಕರ ಬಣ ಸ್ಪಷ್ಟವಾಗಿ ನಿರಾಕರಿಸಿದೆ. ಟಿಎಂಸಿ ಇನ್ನೊಬ್ಬ ರಾಜ್ಯ ಸಭಾ ಸದಸ್ಯೆ ಸುಷ್ಟಿತಾ ದೇವ್ ಕೂಡ ಟಿಎಂಸಿ ತೊರೆಯುವುದಾಗಿ ಹೇಳಿರುವುದು ಪಕ್ಷಕ್ಕೆ ಮತ್ತೊಂದು ಆಘಾತವಾಗಿದೆ.
ಜೂ.8ಕ್ಕೆ ಇಂಡಿ ಕೂಟದ ಸಭೆಯಿತ್ತು. ಸಾಮಾನ್ಯವಾಗಿ ಇಂಡಿ ಕೂಟದ ಸಭೆಗಳಿಗೆ ಮಮತಾ ಖುದ್ದು ಹಾಜರಾಗುತ್ತಿರಲಿಲ್ಲ 2023ರಲ್ಲಿ ಬೆಂಗಳೂರು ಮತ್ತು ಸೆಪ್ಟೆಂಬರ್‌ನಲ್ಲಿ ಮುಂಬೈನಲ್ಲಿ ನಡೆದ ಸಭೆಗಳಲ್ಲಿ ಮಾತ್ರ ಹಾಜರಾಗಿದ್ದರು. ಅದು ಬಿಟ್ಟರೆ ಮೊನ್ನೆ ನಡೆದ ಜೂ.8ರ ಸಭೆಯಲ್ಲಿ ಮಾತ್ರ ಭಾಗವಹಿಸಿದ್ದಾರೆ. ಟಿಎಂಸಿ ಎಲ್ಲ ರೀತಿಯಲ್ಲೂ ಕೊಚ್ಚಿ ಕೊಂಡು ಹೋದಮೇಲೆ ಅವರಿಗೆ ಬುದ್ದಿ ಬಂದಂತಿದೆ. ಸೋಮವಾರ ಅವರನ್ನು ಸೋನಿಯಾ ಅಪ್ಪಿಕೊಂಡಿದ್ದರು. ರಾಹುಲ್ ಕೂಡ ಆತ್ಮೀಯತೆ ತೋರಿಸಿದ್ದರು. ಮಂಗಳವಾರವೂ ಪದೇಪದೇ ಸೋನಿಯಾ, ರಾಹುಲ್ ಜೊತೆಗೆ ಮಮತಾ, ಅಭಿಷೇಕ್ ಇಬ್ಬರೂ ಮಾತುಕತೆ ನಡೆಸಿದ್ದರು.
ಮಮತಾ ಬ್ಯಾನರ್ಜಿಗೆ ಕಾಂಗ್ರೆಸ್‌ನ ಉಪಾಧ್ಯಕ್ಷ ಸ್ಥಾನ ನೀಡಲಾಗುತ್ತದೆ, ಅಭಿಷೇಕ್ ಬ್ಯಾನರ್ಜಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ ದೊರೆಯುತ್ತದೆ. ಬಂಗಾಳದಲ್ಲಿ ತಮ್ಮ ನೆಲೆಯನ್ನು ಕಳೆದುಕೊಂಡರೂ ರಾಷ್ಟ್ರಮಟ್ಟ ದಲ್ಲಿ ಸಕ್ರಿಯರಾಗಬಹುದು. ಇನ್ನೊಂದು ಮೂಲಗಳ ಪ್ರಕಾರ ಮಮತಾರನ್ನು ರಾಜ್ಯಸಭೆಗೆ ಕಳಿಸಿ, ಅಲ್ಲಿ ಆಕೆಯನ್ನು ವಿರೋಧಪಕ್ಷದ ನಾಯಕಿಯನ್ನಾಗಿ ಮಾಡಬೇಕೆಂದು ಅಭಿಷೇಕ್ ಬೇಡಿಕೆಯಿಟ್ಟಿದ್ದಾರೆ. ಈ ಪದೇ ಪದೆ ಸಭೆಗಳು, ಕೆಲವು ಮೂಲಗಳ ಖಚಿತ ಹೇಳಿಕೆಗಳು, ಮಮತಾ ಪಕ್ಷದ ಸದ್ಯದ ದುಸ್ಥಿತಿ ಎಲ್ಲವನ್ನೂ ನೋಡಿದಾಗ ಅವರಿಗೆ ಕಾಂಗ್ರೆಸ್‌ನೊಂದಿಗೆ ವಿಲೀನ ಬಿಟ್ಟರೆ ಬೇರೆ ಆಯ್ಕೆಗಳೇ ಇಲ್ಲ ಎಂಬ ಸಾಧ್ಯತೆಗಳೇ ಹೆಚ್ಚಾಗಿವೆ.
ಕಾಂಗ್ರೆಸ್‌ಗೆ ಲಾಭವೇನು?: 1997ರವರೆಗೆ ಮಮತಾ ಬಂಗಾಳದಲ್ಲಿ ಕಾಂಗ್ರೆಸ್ ನಾಯಕಿಯಾಗಿ 20 ವರ್ಷ ಕೆಲಸ ಮಾಡಿದ್ದರು. ಕೇಂದ್ರ ಸಚಿವೆಯೂ ಆಗಿದ್ದರು. ಬಂಗಾಳದಲ್ಲಿ ಸಿಪಿಐ (ಎಂ) ನೇತೃತ್ವದ ಎಡಪಕ್ಷಗಳ ವಿರುದ್ಧ ಕಾಂಗ್ರೆಸ್ ರಾಜ್ಯ ಘಟಕ ಸರಿಯಾಗಿ ಹೋರಾಡುತ್ತಿಲ್ಲ, ಬಂಗಾಳಕ್ಕೆ ಕಾಂಗ್ರೆಸ್ ಹೈಕಮಾಂಡ್ ಸೂಕ್ತ ಮಹತ್ವ ನೀಡುತ್ತಿಲ್ಲ ಎಂದು ಮಮತಾ ಸಿಟ್ಟಾಗಿದ್ದರು. ಕಾಂಗ್ರೆಸ್ ತೊರೆದು 1998ರಲ್ಲಿ ಟಿಎಂಸಿಯನ್ನು ಆರಂಭಿಸಿದ್ದರು. 2011ರಲ್ಲಿ ಟಿಎಂಸಿ ಅಧಿಕಾರಕ್ಕೇರಿತ್ತು. ಕಾಂಗ್ರೆಸ್ ನಾಯಕರು, ಮತದಾರರನ್ನೇ ಸೆಳೆದುಕೊಂಡು ಮಮತಾ ಟಿಎಂಸಿಯನ್ನು ಕಟ್ಟಿದ್ದರು. ಪ್ರಸ್ತುತ ಮಮತಾ ಟಿಎಂಸಿ ಮೇಲಿನ ಹಿಡಿತ ಕಳೆದುಕೊಂಡಿದ್ದರೂ, ದೊಡ್ಡ ಪ್ರಮಾಣದಲ್ಲಿ ಮತದಾರರನ್ನು ಹೊಂದಿದ್ದಾರೆ. ಅದರ ಪ್ರಯೋಜನ ಕಾಂಗ್ರೆಸ್ ಗೆ ಸಿಗಲಿದೆ. ಬಿಜೆಪಿಗೆ ಪರ್ಯಾಯವಾಗಿ ಬಂಗಾಳ ಮತ್ತು ರಾಷ್ಟ್ರಮಟ್ಟದಲ್ಲಿ ಹೋರಾಡಲು ಶಕ್ತಿ ಸಿಕ್ಕಂತಾಗುತ್ತದೆ.
ಸ್ವಪಕ್ಷೀಯರೇ ಮಮತಾ ವಿರುದ್ದ ಬಂಡಾಯ
ಪ.ಬಂಗಾಳ ವಿಧಾನಸಭಾ ಚುನಾವಣೆ ಫಲಿತಾಂಶ ಬಂದಮೇಲೆ ಟಿಎಂಸಿಯಿಂದ ಗೆದ್ದ 80 ಶಾಸಕರ ಪೈಕಿ 64 ಮಂದಿ ಋತಬ್ರತಾ ಬ್ಯಾನರ್ಜಿ ನೇತೃತ್ವದಲ್ಲಿ ಬಂಡಾಯವೆದ್ದಿದ್ದಾರೆ. ಅವರು ತಮ್ಮನ್ನೇ ವಿರೋಧಪಕ್ಷದ ನಾಯಕರನ್ನಾಗಿ ಮಾಡಬೇಕು, ತಮ್ಮ ಬಣವೇ ನಿಜವಾದ ಟಿಎಂಸಿ ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ ಟಿಎಂಸಿಯಿಂದ ಗೆದ್ದಿರುವ 29 ಸಂಸದರ ಪೈಕಿ 20 ಮಂದಿ ಡಾ.ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಇಂತಹ ಸ್ಥಿತಿಯಲ್ಲಿ 1998ರಲ್ಲಿ ಮಮತಾ ಸ್ಥಾಪಿಸಿರುವ ತೃಣಮೂಲ ಕಾಂಗ್ರೆಸ್ ಅವರ ಕೈಬಿಟ್ಟು ಹೋಗಿರುವುದು ಸ್ಪಷ್ಟ, ಸತತ 15 ವರ್ಷಗಳ ಕಾಲ ಮಮತಾ ವಿರುದ್ಧ ಅಧಿಕಾರ ದುರುಪಯೋಗ, ದುರಾಡಳಿತದ ದೂರುಗಳಿವೆ. ಅದನ್ನೆಲ್ಲ ಲೆಕ್ಕಿಸದೇ ಮೆರೆದಾಡಿದ್ದರು. ಈಗ ಅಧಿಕಾರ ಕಳೆದುಹೋದ ನಂತರ ಅವರ ವಿರುದ್ಧ ಸ್ವಪಕ್ಷೀಯರೇ ತಿರುಗಿಬಿದ್ದಿದ್ದಾರೆ. ಅವರ ವಿರುದ್ಧದ ತನಿಖೆಗಳೂ ತೀವ್ರಗೊಂಡಿದೆ. ಮಮತಾಗೆ ಬಂಗಾಳದಲ್ಲಿ ಪಕ್ಷದ ಮೇಲೆ ಹಿಡಿತ ತಪ್ಪಿದರೂ, ಕಾಂಗ್ರೆಸ್ ನೊಂದಿಗೆ ವಿಲೀನಗೊಳ್ಳುವುದರಿಂದ ತಮ್ಮನ್ನು ನಂಬಿದವರಿಗೆ ನೆಲೆ ತೋರಿಸಬಹುದು. ಹಾಗೆಯೇ ವಿರೋಧಿಗಳ ಮೇಲೆ ಪರೋಕ್ಷವಾಗಿ ಹಿಡಿತ ಸಾಧಿಸಬಹುದು ಎಂದು ಭಾವಿಸಿದ್ದಾರೆ.






