ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ ಇಬ್ಬರಿಗೂ ಬೇಡವಾದ ಬೆಂಗಳೂರು ನಗರಾಭಿವೃದ್ಧಿ ಖಾತೆ ಯಾರಿಗೆ?
Views: 65
ಕನ್ನಡ ಕರಾವಳಿ ಸುದ್ದಿ: ಡಿ.ಕೆ.ಶಿವಕುಮಾರ್ ನೇತೃತ್ವದ ನೂತನ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ದಿನದಲ್ಲಿ ಭುಗಿಲೆದ್ದಿದ್ದ ಸಚಿವ ರಾಮಲಿಂಗಾರೆಡ್ಡಿ ಅವರ ರಾಜೀನಾಮೆಯ ವಿವಾದ ಸುಖಾಂತ್ಯವಾಗಿದೆ. ಈ ಗೊಂದಲ ಬಗೆಹರಿಯಿತು ಎಂದು ಸಮಾಧಾನವಾಗುವ ಮೊದಲೇ, ಬೆಂಗಳೂರು ನಗರಾಭಿವೃದ್ಧಿ ಇಲಾಖೆಗೆ ಸಚಿವರು ಯಾರು ಎನ್ನುವ ಗೊಂದಲ ಪಕ್ಷದಲ್ಲಿ ಶುರುವಾಗಿದೆ.
ಖಾತೆ ಹಂಚಿಕೆಯ ಕ್ಷಣದಿಂದಲೂ ಕಂದಾಯ ಇಲಾಖೆಯ ಮೇಲೆ ಕಣ್ಣಿಟ್ಟಿದ್ದ ಕೃಷ್ಣ ಬೈರೇಗೌಡ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಟ್ಟಿದ್ದು ಪೂರ್ಣ ಒಪ್ಪಿಗೆ ಇರಲಿಲ್ಲ. ಇದ ರೊಂದಿಗೆ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಪ್ರಹಸನ, ಜಿಬಿಎ ಚುನಾವಣೆಯಿಂದ ಅಂತರ ಕಾಯ್ದುಕೊಳ್ಳುವುದಾಗಿ ರೆಡ್ಡಿ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಈ ಖಾತೆ ನನಗೆ ಬೇಡ ಎನ್ನುವ ಕ್ಯಾತೆಯನ್ನು ಕೃಷ್ಣ ಬೈರೇಗೌಡ ಎತ್ತಿದ್ದಾರೆ. ಈ ಖಾತೆಯ ಬದಲು ಬೇರೆ ಖಾತೆಯ ಬೇಡಿಕೆಯನ್ನು ಡಿ.ಕೆ.ಶಿವಕುಮಾರ್ ಹಾಗೂ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ನಡುವೆ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಬಿಗಿಪಟ್ಟು ಹಿಡಿದು ರಾಜೀನಾಮೆಯ ಸವಾಲು ತೆಗೆದುಕೊಂಡಿದ್ದ ರಾಮಲಿಂಗಾರೆಡ್ಡಿ ಅವರು, ಕೃಷ್ಣಬೈರೇಗೌಡ ಅವರು ಖಾತೆ ಬಿಟ್ಟು ಕೊಡಲು ಸಿದ್ದರಿದ್ದರೂ, ಅವರು ಬಿಟ್ಟುಕೊಡುವ ಖಾತೆ ನಾನು ತೆಗೆದುಕೊಳ್ಳಲ್ಲ. ಈಗ ನೀಡಿರುವ ಜಲಸಂಪನ್ಮೂಲದಲ್ಲಿಯೇ ಮುಂದುವರಿಯುವೆ ಅಥವಾ ಬೇರೆ ಖಾತೆ ನೀಡಿ. ಆದರೆ ಬೆಂಗಳೂರು ನಗರಾಭಿವೃದ್ಧಿ ಮಾತ್ರ ಬೇಡ ಎಂದಿದ್ದಾರೆ. ಇದೀಗ ಅತ್ತ ಕೃಷ್ಣಬೈರೇಗೌಡ ಅವರಿಗೂ ಬೇಡವಾದ, ಇತ್ತ ರಾಮಲಿಂಗಾರೆಡ್ಡಿ ಅವರಿಗೂ ಬೇಡವಾದ ಸಂಪುಟದ ಪ್ರಮುಖ ಖಾತೆಯಾಗಿರುವ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಅನಾಥವಾಗಿ ಉಳಿಯುವ ಸಾಧ್ಯತೆಯಿದೆ. ಈ ಇಬ್ಬರಲ್ಲಿ ಒಬ್ಬರಿಗೆ ಹಂಚುವರೋ ಅಥವಾ ಮುಖ್ಯಮಂತ್ರಿಗಳೇ ನಿರ್ವಹಣೆ ಮಾಡುವರೇ ಎನ್ನುವ ಗೊಂದಲ ಪಕ್ಷದಲ್ಲಿ ಶುರುವಾಗಿದೆ ಎಂದು ಮೂಲಗಳು ತಿಳಿಸಿವೆ.ಇತ್ತ ರಾಮಲಿಂಗಾರೆಡ್ಡಿ, ಅತ್ತ ಕೃಷ್ಣಬೈರೇಗೌಡ ಇಬ್ಬರೂ ಬೆಂಗಳೂರು ನಗರಾಭಿವೃದ್ಧಿ ಖಾತೆಯಿಂದ ಅಂತರ ಕಾಯ್ದುಕೊಳ್ಳುತ್ತಿರುವುದರಿಂದ ಪುನಃ ಈ ಖಾತೆ ಡಿ.ಕೆ.ಶಿವಕುಮಾರ್ ಅವರೇ ಹಿಂಪಡೆಯುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.






