ಯುವಜನ

ಪ್ರೇಯಸಿಯ ಭೀಕರ ಕೊಲೆಯಿಂದ ಮನನೊಂದು ಪ್ರಿಯಕರ ಆಕೆಯ ನೆನಪಿನಲ್ಲಿಯೇ ಆತ್ಮಹತ್ಯೆ

Views: 128

ಕನ್ನಡ ಕರಾವಳಿ ಸುದ್ದಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನದಿಗುಡಕೇತರ ಗ್ರಾಮದ ಕೃಷ್ಣಾ ಪಾಟೀಲ್ (30) ಹಾಗೂ ಅದೇ ಊರಿನ ಸತ್ಯವ್ವಾ ಹೆಳವಿ ಪರಸ್ಪರ ಗಾಢವಾಗಿ ಪ್ರೀತಿಸುತ್ತಿದ್ದರು. ಆದರೆ, ಇವರಿಬ್ಬರ ಪ್ರೀತಿಗೆ ಸತ್ಯವ್ವಾಳ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ನಾಲ್ಕು ವರ್ಷಗಳ ಹಿಂದೆ ಸತ್ಯವ್ವಾಳನ್ನು ರಾಯಬಾಗ ಮೂಲದ ಯುವಕನೊಂದಿಗೆ ಬಲವಂತವಾಗಿ ಮದುವೆ ಮಾಡಿಕೊಟ್ಟಿದ್ದರು.

ಮದುವೆಯಾದರೂ ಪ್ರಿಯಕರನ ಮೇಲಿನ ಪ್ರೀತಿ ಮರೆಯದ ಸತ್ಯವ್ವಾ, ಗಂಡನ ಮನೆ ಬಿಟ್ಟು ಕಳೆದ ಏಪ್ರಿಲ್ 5ರಂದು ಕೃಷ್ಣಾನೊಂದಿಗೆ ಎಸ್ಕೇಪ್ ಆಗಿದ್ದಳು. ಬಳಿಕ ಇಬ್ಬರೂ ಸವದತ್ತಿಯಲ್ಲಿ ಮನೆ ಮಾಡಿ ಜೀವನ ಸಾಗಿಸುತ್ತಿದ್ದರು. ಈ ಬಗ್ಗೆ ಯಮಕನಮರಡಿ ಮತ್ತು ರಾಯಬಾಗ ಠಾಣೆಗಳಲ್ಲಿ ಮಿಸ್ಸಿಂಗ್ ಕೇಸ್ ಕೂಡ ದಾಖಲಾಗಿತ್ತು. ಕೊನೆಗೆ ಇಬ್ಬರ ಸುಳಿವು ಪಡೆದ ಸತ್ಯವ್ವಾಳ ಕುಟುಂಬಸ್ಥರು, ಏಪ್ರಿಲ್ 10ರಂದು ಇಬ್ಬರನ್ನೂ ಪತ್ತೆ ಹಚ್ಚಿ ವಾಪಸ್ ಕರೆತಂದಿದ್ದರು.

ಊರಿಗೆ ಬಂದ ಬಳಿಕ ಕೃಷ್ಣಾನನ್ನು ಬಿಟ್ಟುಬಿಡುವಂತೆ ಸತ್ಯವ್ವಾಳಿಗೆ ಮನೆಯವರು ತೀವ್ರ ಒತ್ತಡ ಹೇರಿದ್ದರು. ಆಕೆ ಗಂಡನ ಮನೆಗೆ ಹೋಗಲು ಒಪ್ಪದಿದ್ದಾಗ, ಮಹಾರಾಷ್ಟ್ರದ ಮೀರಜ್ ಜಿಲ್ಲೆಯ ಅರಗ ಗ್ರಾಮಕ್ಕೆ ಕರೆದೊಯ್ದು, ಏಪ್ರಿಲ್ 13ರಂದು ತಾಯಿಯ ಮುಂದೆಯೇ ಮರ್ಯಾದೆಗೆ ಅಂಜಿ ಸತ್ಯವ್ವಾಳನ್ನು ಕೊಲೆ ಮಾಡಿದ್ದರು. ಹೃದಯಾಘಾತದಿಂದ ಮೃತಪಟ್ಟಿದ್ದಾಳೆಂದು ಸುಳ್ಳು ಕಥೆ ಕಟ್ಟಿ ಶವವನ್ನೂ ಸುಟ್ಟು ಹಾಕಿದ್ದರು. ಆದರೆ, ಪ್ರಿಯಕರ ಕೃಷ್ಣಾ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಯಮಕನಮರಡಿ ಪೊಲೀಸರು, ಸತ್ಯವ್ವಾಳ ತಂದೆ ಮತ್ತು ಸಹೋದರ ಸೇರಿ ಮೂವರನ್ನು ಬಂಧಿಸಿ ಜೈಲಿಗಟ್ಟಿದ್ದರು.

ಪ್ರೇಯಸಿಯ ಭೀಕರ ಕೊಲೆಯಿಂದ ಕೃಷ್ಣಾ ತೀವ್ರವಾಗಿ ನೊಂದಿದ್ದನು. ಜೈಲಿಗೆ ಕಳಿಸಿ ಸೇಡು ತೀರಿಸಿಕೊಂಡರೂ ಆತನ ಮನಸ್ಸಿಗೆ ಶಾಂತಿ ಸಿಕ್ಕಿರಲಿಲ್ಲ. ಕೊನೆಗೆ ಬರೋಬ್ಬರಿ ಎರಡು ತಿಂಗಳ ಬಳಿಕ, ಜೂನ್ 4 ರಂದು ಪ್ರೇಯಸಿ ಸತ್ಯವ್ವಾಳ ಹುಟ್ಟುಹಬ್ಬದ ದಿನವೇ, ಆಕೆಯ ನೆನಪಿನಲ್ಲಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

 

Related Articles

Back to top button
error: Content is protected !!