ಮುಗಿಯದ ಖಾತೆ ಸಂಘರ್ಷ:ರಾಮಲಿಂಗಾ ರೆಡ್ಡಿ ಬೆನ್ನಲ್ಲೇ ಮುನಿಯಪ್ಪ ಬೇಡಿಕೆಗೆ ಹೈಕಮಾಂಡ್ ಮಣಿಯುತ್ತಾ?
Views: 40
ಕನ್ನಡ ಕರಾವಳಿ ಸುದ್ದಿ: ಹಿರಿಯ ನಾಯಕ ಹಾಗೂ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ತಮಗೆ ನೀಡಿರುವ ಖಾತೆ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ಸಿನಿಯಾರಿಟಿ ಆಧಾರದ ಮೇಲೆ ತಮಗೆ ಉತ್ತಮ ಖಾತೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಲ್ಲಿ ಖಾತೆ ಹಂಚಿಕೆ ಸರಿಯಾಗಿ ನಡೆದಿಲ್ಲ. ಈಗಿರುವ ಆಹಾರ ಇಲಾಖೆ ನನಗೆ ಸಮಾಧಾನ ತಂದಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೆ 2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಕಷ್ಟವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಮೂರು ವರ್ಷಗಳಿಂದ ಆಹಾರ ಇಲಾಖೆಯನ್ನು ನಿಭಾಯಿಸಿದ್ದೇನೆ ಎಂದು ಮುನಿಯಪ್ಪ, ತಮಗೆ ಜನರ ಸೇವೆ ಮಾಡಲು ಹೆಚ್ಚಿನ ಅವಕಾಶವಿರುವ ಇಲಾಖೆ ಬೇಕೆಂದು ಕೇಳಿದ್ದಾರೆ. ಈ ಸಂಬಂಧ ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ ಎಂದಿದ್ದಾರೆ.
ಮುನಿಯಪ್ಪ ಹೇಳಿಕೆಯಂತೆ ಪ್ರೊಟಕಾಲ್ ಪ್ರಕಾರ ಹಿರಿಯರಿಗೆ ಸಿಗಬೇಕಾದ ಗೌರವ ಮತ್ತು ಖಾತೆ ಸಿಕ್ಕಿಲ್ಲ.
ಖಾತೆ ಹಂಚಿಕೆಯಲ್ಲಿ ಸಮಾನತೆ ಇಲ್ಲ, ಇದು ಗೊಂದಲಕ್ಕೆ ದಾರಿ ಮಾಡಿಕೊಡುತ್ತದೆ.
ನನ್ನ ಮನವಿಯನ್ನು ಹೈಕಮಾಂಡ್ ಪುರಸ್ಕರಿಸುತ್ತದೆ ಮತ್ತು ಗೊಂದಲ ಸರಿಪಡಿಸುತ್ತದೆ ಎಂಬ ನಂಬಿಕೆ ನನಗಿದೆ
ಒಟ್ಟಾರೆಯಾಗಿ, ಸಿದ್ದರಾಮಯ್ಯ ಸಂಪುಟದಲ್ಲಿ ಹಿರಿಯ ಸಚಿವರೊಬ್ಬರು ಹೀಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವುದು ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಚಿವ ಮುನಿಯಪ್ಪ ಬೇಡಿಕೆಗೆ ಹೈಕಮಾಂಡ್ ಮಣಿಯುತ್ತಾ? ಅಥವಾ ಈ ಅಸಮಾಧಾನ ಮತ್ತಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತಾ? ಕಾದು ನೋಡಬೇಕಿದೆ.






