ಮಾಜಿ ಪ್ರೇಯಸಿ ಕರೆದಳೆಂದು ಹೋದ ಪ್ರಿಯಕರ ದುರಂತ ಸಾವು
Views: 88
ಕನ್ನಡ ಕರಾವಳಿ ಸುದ್ದಿ: ಮಾಜಿ ಪ್ರೇಯಸಿಯ ಕರೆ ಹಿನ್ನೆಲೆ ಆಕೆಯನ್ನು ಭೇಟಿ ಮಾಡಲು ಮನೆಗೆ ಹೋಗಿದ್ದ ಯುವಕನೊಬ್ಬ ತೀವ್ರ ಹಲ್ಲೆಗೊಳಗಾಗಿ ಸಾವನ್ನಪ್ಪಿರುವ ಘಟನೆ ನಗರದ ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಮನಗರದ ಬಿಡಿ ಕಾಲೋನಿ ನಿವಾಸಿ ಮೊಹಮ್ಮದ್ ಖಾಸಿಂ(27) ಕೊಲೆಯಾದ ಯುವಕ. ಕೊಲೆ ಆರೋಪ ಹಿನ್ನೆಲೆ ಮಾಜಿ ಪ್ರೇಯಸಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸದ್ಯ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?: ಮೊಹಮ್ಮದ್ ಖಾಸಿಂ ಹಾಗೂ ಯುವತಿ ಕಳೆದ ನಾಲ್ಕು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿಗೆ ಬೆಂಗಳೂರಿನ ಮತ್ತೊಬ್ಬ ಯುವಕನೊಂದಿಗೆ ವಿವಾಹ ಮಾಡಲಾಗಿತ್ತು. ಮೇ 25ರ ಸಂಜೆ ಮಾಜಿ ಪ್ರೇಯಸಿಯ ಕರೆಯ ಮೇರೆಗೆ ಆಕೆಯನ್ನು ಭೇಟಿ ಮಾಡಲು ಖಾಸಿಂ ಬ್ಯಾಟರಾಯನಪುರ ವ್ಯಾಪ್ತಿಯ ಶ್ಯಾಮಣ್ಣ ಗಾರ್ಡನ್‌ನಲ್ಲಿರುವ ಆಕೆಯ ಮನೆಗೆ ಹೋಗಿದ್ದಾನೆ.
ಈ ವೇಳೆ ಪ್ರೇಯಸಿಯ ಮನೆಯಲ್ಲಿ ಖಾಸಿಂ ಆಕೆಯ ಪತಿ ಕೈಯಲ್ಲಿ ಸಿಕ್ಕಿಬಿದ್ದಿದ್ದ. ಇದರಿಂದ ಆಕ್ರೋಶಗೊಂಡ ಯುವತಿಯ ಪತಿ ಹಾಗೂ ಆತನ ಕುಟುಂಬಸ್ಥರು ಮೊಹಮ್ಮದ್ ಖಾಸಿಂ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆಯ ಬಳಿಕ ತೀವ್ರವಾಗಿ ಗಾಯಗೊಂಡಿದ್ದ ರಾಮನಗರದ ತನ್ನ ನಿವಾಸಕ್ಕೆ ತೆರಳಿ ಮಲಗಿದ್ದ. ಗಾಯದ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಮೂರು ದಿನಗಳ ಕಾಲ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಖಾಸಿಂ ಕೊನೆಯುಸಿರೆಳೆದಿದ್ದಾನೆ.






