ದುಬೈ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೋಮಾದಲ್ಲಿದ್ದ ಕಲಾವಿದೆ ಶ್ರೀಲತಾ ತಂತ್ರಿ ನಿಧನ
Views: 58
ಕನ್ನಡ ಕರಾವಳಿ ಸುದ್ದಿ: ದುಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಕಳೆದ ಕೆಲವು ತಿಂಗಳುಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಕಿನ್ನಿಗೋಳಿ ಸಮೀಪದ ಪುನರೂರಿನ ಯುವತಿ ಶ್ರೀಲತಾ ತಂತ್ರಿ (26) ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತ ಶ್ರೀಲತಾ ತಂತ್ರಿ ಅವರು ಪುನರೂರಿನ ವಾಸುದೇವ ಅಗ್ರಹಾರ ನಿವಾಸಿಯಾಗಿದ್ದು, ಕರಾವಳಿಯಲ್ಲಿ ಭರತನಾಟ್ಯ ಹಾಗೂ ಯಕ್ಷಗಾನ ಕಲಾವಿದೆಯಾಗಿ ಮತ್ತು ಖ್ಯಾತ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದರು.
ಮಂಗಳೂರು ರಿಯಲ್ ಎಸ್ಟೇಟ್ ಉದ್ಯೋಗ ನಿಮಿತ್ತ ದುಬೈಗೆ ತೆರಳಿದ್ದ ಶ್ರೀಲತಾ ಅವರು ಕಳೆದ ವರ್ಷದ (2025) ನವೆಂಬರ್ ತಿಂಗಳಲ್ಲಿ ದುಬೈನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದರಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದ ತೀವ್ರತೆಗೆ ಅವರು ಕೋಮಾ ಸ್ಥಿತಿಗೆ ತಲುಪಿದ್ದರು. ಆರಂಭದಲ್ಲಿ ಅವರಿಗೆ ದುಬೈನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.
ಆದರೆ, ಅವರ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಚೇತರಿಕೆ ಕಂಡುಬರದ ಹಿನ್ನೆಲೆಯಲ್ಲಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ ಮಂಗಳೂರಿನ ಆಸ್ಪತ್ರೆಯಲ್ಲೇ ಕೋಮಾದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದ್ದಾರೆ. ಅವಿವಾಹಿತರಾಗಿದ್ದ ಮೃತರು ತಾಯಿ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ. ಯುವ ಕಲಾವಿದೆಯ ಅಕಾಲಿಕ ನಿಧನಕ್ಕೆ ಕರಾವಳಿಯ ಕಲಾ ವಲಯ ತೀವ್ರ ಸಂತಾಪ ಸೂಚಿಸಿದೆ.






