ಬೈಂದೂರು:ಉಪ್ಪುಂದ ಕೊಡಿ ಹಬ್ಬ ಸಂಭ್ರಮಕ್ಕೆ ತಯಾರಿಯಲ್ಲಿದ್ದ ಇಬ್ಬರು ಯುವಕರು ಭೀಕರ ರಸ್ತೆ ಅಪಘಾತದಲ್ಲಿ ಸಾವು
Views: 77
ಕನ್ನಡ ಕರಾವಳಿ ಸುದ್ದಿ: ಭೀಕರ ರಸ್ತೆ ಅಪಘಾತದಲ್ಲಿ ಉಪ್ಪುಂದದ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಶಿರೂರಿನ ಇಂಡಿಯನ್ ಪೆಟ್ರೋಲ್ ಬಂಕ್ ಸಮೀಪ ಸೋಮವಾರ ರಾತ್ರಿ ಸಂಭವಿಸಿದೆ.
ಮೃತರನ್ನು ಉಪ್ಪುಂದ ಜನತಾ ಕಾಲೊನಿಯ ನಿವಾಸಿಗಳಾದ ಅಭಿಷೇಕ ಖಾರ್ವಿ (23) ಹಾಗೂ ಪ್ರವೀಣ ಖಾರ್ವಿ (23) ಎಂದು ಗುರುತಿಸಲಾಗಿದೆ.
ಉಪ್ಪುಂದದ ಕೊಡಿ ಹಬ್ಬದ ಹಿನ್ನೆಲೆಯಲ್ಲಿ ಇಬ್ಬರೂ ಯುವಕರು ಊರಿಗೆ ಆಗಮಿಸಿದ್ದರು.ಪ್ರವೀಣ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರೆ, ಅಭಿಷೇಕ ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಇಬ್ಬರೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೇರಿದವರಾಗಿದ್ದು, ಕುಟುಂಬದ ಆಧಾರವಾಗಿದ್ದ ಯುವಕರನ್ನು ಕಳೆದುಕೊಂಡಿರುವುದು ಮನೆಯವರನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ.
ಸೋಮವಾರ ರಾತ್ರಿ ಇಬ್ಬರೂ ಉಪ್ಪುಂದದಿಂದ ಶಿರೂರು ಟೋಲ್ಗೇಟ್ ಕಡೆಗೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಶಿರೂರಿನ ಇಂಡಿಯನ್ ಪೆಟ್ರೋಲ್ ಬಂಕ್ ಸಮೀಪ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ತೀವ್ರ ರಕ್ತಸ್ರಾವದಿಂದಾಗಿ ಇಬ್ಬರೂ ಘಟನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದು ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಅಪಘಾತಕ್ಕೆ ಕಾರಣವೇನೆಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಯುವಕರ ದುರಂತ ಸಾವು ಉಪ್ಪುಂದ ಪರಿಸರದಲ್ಲಿ ಶೋಕದ ವಾತಾವರಣ ಸೃಷ್ಟಿಸಿದೆ.ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಗಳಿಗೆ ಯುವಕರ ಅಕಾಲಿಕ ಸಾವು ಆಘಾತ ತಂದಿದೆ.






