ಕೋಟೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಡಾ.ಸುಬ್ರಹ್ಮಣ್ಯ.ಎ ಅಧಿಕಾರ ಸ್ವೀಕಾರ
Views: 0
ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ಎಂ. ವರದರಾಜ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕರ್ನಾಟಕ ಸರ್ಕಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಗ್ರೇಡ್-1 ಪ್ರಾಂಶುಪಾಲರಾಗಿ ಡಾ.ಸುಬ್ರಹ್ಮಣ್ಯ ಎ ಬಳಸು ಅವರು ನ.24 ರಂದು ಅಧಿಕಾರ ಸ್ವೀಕರಿಸಿದ್ದಾರೆ.
ದಿನಾಂಕ 19.11.2026ರಂದು ಅಧಿಕೃತವಾಗಿ ಸ್ಥಳ ನಿಯುಕ್ತಿ ಆದೇಶ ನೀಡಲಾಗಿದ್ದು, ಶ್ರೀಯುತರು ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಶ್ರೀ ನಾಗರಾಜ ವೈದ್ಯ ಇವರಿಂದ ಅಧಿಕಾರ ಸ್ವೀಕಾರ ಮಾಡಿರುತ್ತಾರೆ.
2007ರಲ್ಲಿ ಸೇವೆಗೆ ಸೇರಿದ ಇವರು ಕೋಟೇಶ್ವರ ಮತ್ತು ಕೋಟ ಸರಕಾರಿ ಪದವಿ ಕಾಲೇಜಿನಲ್ಲಿ ಒಟ್ಟು 19 ವರ್ಷಗಳ ಕಾಲ ಅರ್ಥಶಾಸ್ತ್ರ ಸಹಾಯಕ ಉಪನ್ಯಾಸಕರು ಮತ್ತು ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.
ಸುಬ್ರಹ್ಮಣ್ಯ ಅವರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಜರ್ನಲ್ ಗಳನ್ನು ಸುಮಾರು 27 ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುತ್ತಾರೆ. 16 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಶೋಧನಾ ಲೇಖನಗಳನ್ನು ಮಂಡನೆ ಮಾಡಿರುತ್ತಾರೆ. ಸಂಶೋಧನಾ ಕೌಶಲ್ಯ, ಉದ್ಯಮಶೀಲತೆ, ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಸಮ್ಮೇಳನಗಳನ್ನು ಆಯೋಜನೆ ಮಾಡಿರುತ್ತಾರೆ. ಇವರ ಸೇವಾ ಅವಧಿಯಲ್ಲಿ ಆಂತರಿಕ ಗುಣಮಟ್ಟದ ಬರವಸಕೋಶ, ಉದ್ಯೋಗ ಮಾರ್ಗದರ್ಶನ ಮತ್ತು ಸ್ಥಾನೀಕರಣ ಘಟಕ ರಾಜ್ಯ ಸರ್ಕಾರದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಸಂಚಾಲಕರಾಗಿ ಮತ್ತು ಕಾಲೇಜಿನ ಇತರ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿರುತ್ತಾರೆ.
‘ಖಜಾನೆ ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ ಮಸೂದೆ- 2003 ನಂತರದಲ್ಲಿ ಕೇಂದ್ರ ಸರಕಾರದ ಖಜಾನೆ ನೀತಿ ಪರಿಪಾಲನೆ: ಒಂದು ಸಮಗ್ರ ಅಧ್ಯಯನ’ ಎಂಬ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್ಡಿ ಪದವಿ ಪಡೆದಿದ್ದರು.
ಸುಬ್ರಹ್ಮಣ್ಯ ಅವರು ಬೈಂದೂರು ಪಡುವರಿಯ ಅಪ್ಪಯ್ಯನ ಮನೆ ದಿ. ವೆಂಕಟರಮಣ ಹಾಗೂ ಲಕ್ಷ್ಮೀ ಅವರ ಪುತ್ರರಾಗಿದ್ದಾರೆ. ಪ್ರಸ್ತುತ ಅವರು ಕಾಳವಾರದಲ್ಲಿ ವಾಸಿಸುತ್ತಿದ್ದಾರೆ.
ಪ್ರಾರ್ಥಮಿಕ, ಮಾಧ್ಯಮಿಕ ಮತ್ತು ಪಿಯುಸಿ ಶಿಕ್ಷಣವನ್ನು ಕೋಟೆ ಬಾಗಿಲು ಪಡುವರಿ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಬೈಂದೂರು ಇಲ್ಲಿ ವ್ಯಾಸಂಗ ಮಾಡಿರುತ್ತಾರೆ.
ಪದವಿ ಶಿಕ್ಷಣವನ್ನು ಭಟ್ಕಳದ ಅಂಜುಮನ್ ಕಾಲೇಜು ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿ.ವಿಯಲ್ಲಿ ಪಡೆದಿರುತ್ತಾರೆ.
ಕಾಲೇಜು ಬೋಧಕ -ಬೋಧಕೇತರ ಸಿಬ್ಬಂದಿ ವರ್ಗ, ಅಭಿವೃದ್ಧಿ ಸಮಿತಿ, ಶಿಕ್ಷಕ -ರಕ್ಷಕ ಸಂಘ, ಹಳೆ ವಿದ್ಯಾರ್ಥಿಗಳ ಸಂಘ, ಮತ್ತು ವಿದ್ಯಾರ್ಥಿಗಳ ಸಂಪೂರ್ಣ ಸಹಕಾರದಿಂದ ಸಂಸ್ಥೆಯ ಶ್ರೇಯೋಭಿವೃದ್ಧಿ ಸಾಧಿಸಲಿ ಎಂದು ಶುಭ ಹಾರೈಸುತ್ತೇವೆ.








