ಶಿಕ್ಷಣ

ಬದಲಾಗುತ್ತಿರುವ ಸ್ಪರ್ಧಾತ್ಮಕ ಜಗತ್ತಿಗೆ ಈಗಿನಿಂದಲೇ ಸಿದ್ಧರಾಗಿ – ಚಂದನ್ ಶೆಟ್ಟಿ ( ಅತ್ಯುತ್ತಮ ಉದ್ಯೋಗಿ ಪುರಸ್ಕೃತರು, ಅಕ್ಷಯ್ ಕಲ್ಪ ಆರ್ಗ್ಯಾನಿಕ್ ಬೆಂಗಳೂರು ); ಸಂಭ್ರಮದ ‘ಆವಿರ್ಭವ 2026–27’

Views: 5

ಕನ್ನಡ ಕರಾವಳಿ ಸುದ್ದಿ: ಶಂಕರನಾರಾಯಣದ ಮದರ್ ತೆರೆಸಾ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢಶಾಲಾ ಹಾಗೂ ಪದವಿ ಪೂರ್ವ ವಿಭಾಗದ ವಾರ್ಷಿಕೋತ್ಸವ ‘ಆವಿರ್ಭವ 2026–27’ ಕಾರ್ಯಕ್ರಮವು ಸಂಭ್ರಮದಿಂದ ಜರುಗಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಬ್ಯಾಂಕಿನ ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕರು ಹಾಗೂ ಪ್ರಾದೇಶಿಕ ಮುಖ್ಯಸ್ಥರಾದ ಶ್ರೀ ರಮೇಶ್ ವೈದ್ಯ ಅವರು ಮಾತನಾಡಿ, “ಮೂರು ದಶಕಗಳ ಸುದೀರ್ಘ ಪಯಣದಲ್ಲಿಯೂ ಶಿಕ್ಷಣದ ಗುಣಮಟ್ಟವನ್ನು ಒಂದೇ ರೀತಿಯಲ್ಲಿ ಕಾಯ್ದುಕೊಂಡು ಬಂದಿರುವುದು ಸಂಸ್ಥೆಯ ಹೆಗ್ಗಳಿಕೆ. ಕಾಲ ಬದಲಾದರೂ ಶಿಕ್ಷಣದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದ ಸಂಸ್ಥೆಯ ಕಾರ್ಯ ಶ್ಲಾಘನೀಯ” ಎಂದು ರಮೇಶ್ ವೈದ್ಯ ಅವರು ಪ್ರಶಂಸಿದರು . ಶಿಕ್ಷಣದ ಗುಣಮಟ್ಟವನ್ನು ಕಾಪಾಡಿಕೊಂಡು, ಉತ್ತಮ ನಿರ್ವಹಣೆಯೊಂದಿಗೆ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಆಡಳಿತ ಮಂಡಳಿಯ ಪರಿಶ್ರಮ ನಿಜಕ್ಕೂ ಮೆಚ್ಚುವಂತಹದ್ದು” ಎಂದರು.

ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಸ್ಥೆಯ 2016ನೇ ಸಾಲಿನ ಹಳೆ ವಿದ್ಯಾರ್ಥಿ ಹಾಗೂ ಅಕ್ಷಯಕಲ್ಪ ಆರ್ಗ್ಯಾನಿಕ್ ಸಂಸ್ಥೆಯ ಡೈರೆಕ್ಟ್ ಡಿಸ್ಟ್ರಿಬ್ಯೂಷನ್ ವಿಭಾಗದ ಮುಖ್ಯಸ್ಥರಾದ ಶ್ರೀ ಚಂದನ್ ಶೆಟ್ಟಿ ಅವರು” ವಿದ್ಯಾರ್ಥಿಗಳಿಗೆ ಬದಲಾಗುತ್ತಿರುವ ಸ್ಪರ್ಧಾತ್ಮಕ ಜಗತ್ತಿಗೆ ಈಗಿನಿಂದಲೇ ಸಿದ್ಧರಾಗುವಂತೆ ಕರೆ ನೀಡಿದರು. ಕೇವಲ ಅಂಕಗಳ ಗಳಿಕೆಯಷ್ಟೇ ಮುಖ್ಯವಲ್ಲ; ಜ್ಞಾನ, ಕೌಶಲ, ಆತ್ಮವಿಶ್ವಾಸ ಹಾಗೂ ನಿರಂತರ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ತಿಳಿಸಿದರು. ತಮ್ಮ ಸಾಧನೆಯ ಹಾದಿಯಲ್ಲಿ ಸಂಸ್ಥೆ ನೀಡಿದ ಶಿಕ್ಷಣ, ಪ್ರೋತ್ಸಾಹ ಮತ್ತು ಮಾರ್ಗದರ್ಶನ ಮಹತ್ವದ ಪಾತ್ರ ವಹಿಸಿದೆ” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕರಾದ ಕುಮಾರಿ ಶಮಿತಾ ರಾವ್ ಹಾಗೂ ಕುಮಾರಿ ರೆನಿಟಾ ಲೋಬೋ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಸಂಸ್ಥೆಯ 28 ವರ್ಷಗಳ ಸವಾಲಿನ ಹಾಗೂ ಸಾರ್ಥಕ ಪಯಣವನ್ನು ಸ್ಮರಿಸಿದರು. ಸಂಸ್ಥೆಯ ಹಳೆ ವಿದ್ಯಾರ್ಥಿ ಚಂದನ್ ಶೆಟ್ಟಿ ಅವರು ಸತತ ಮೂರು ವರ್ಷಗಳಿಂದ ಉತ್ತಮ ಉದ್ಯೋಗಿ ಪ್ರಶಸ್ತಿ ಪಡೆಯುತ್ತಿರುವುದು ಸಂಸ್ಥೆಗೆ ಹೆಮ್ಮೆಯ ಸಂಗತಿ ಎಂದು ಅಭಿನಂದಿಸಿದರು. ಅವರ ಸಾಧನೆ ಮತ್ತು ಪರಿಶ್ರಮವನ್ನು ಇಂದಿನ ವಿದ್ಯಾರ್ಥಿಗಳು ಮಾದರಿಯಾಗಿ ಸ್ವೀಕರಿಸಿ, ಅವರ ಹಾದಿಯಲ್ಲಿ ಮುನ್ನಡೆಯುವಂತೆ ಕರೆ ನೀಡಿದರು. ಸಂಸ್ಥೆಯ ಬೆಳವಣಿಗೆಯಲ್ಲಿ ಪೋಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನೀಡಿದ ನಿರಂತರ ಸಹಕಾರ ಮತ್ತು ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿದರು.

ಸಂಸ್ಥೆಯ ರಾಜ್ಯಮಟ್ಟದ ಸಾಧಕರಾದ ಶ್ರೀ ಆಕಾಶ್ ಪೂಜಾರಿ ಹಾಗೂ ಶ್ರೀ ಸಮಿತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲರಾದ ಶ್ರೀ ಜೈಸನ್ ಲೂಯಿಸ್ ಅವರು ವರ್ಷದ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಪಠ್ಯೇತರ ಸಾಧನೆಗಳ ವರದಿ ವಾಚಿಸಿದರು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮನರಂಜಿಸಿದರು.

ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಕುಮಾರಿ ಸಾನ್ವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಕುಮಾರಿ ತನ್ವಿ ಸ್ವಾಗತಿಸಿದರು. ಉಪನ್ಯಾಸಕಿ ಶ್ರೀಮತಿ ವೈಶಾಲಿ ಶೆಟ್ಟಿ ಅತಿಥಿಗಳ ಪರಿಚಯ ಮಾಡಿದರು. ಕುಮಾರಿ ರಕ್ಷಿತಾ ವಂದನಾರ್ಪಣೆ ಸಲ್ಲಿಸಿದರು.ಶಿಕ್ಷಕರು, ಉಪನ್ಯಾಸಕರು, ಪೋಷಕರು ಹಾಗೂ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ನಡೆದ ‘ಆವಿರ್ಭವ 2026–27’ ಕಾರ್ಯಕ್ರಮವು ಸಂಸ್ಥೆಯ ಸಾಧನೆ, ಸಂಸ್ಕೃತಿ, ಕೃತಜ್ಞತೆ ಹಾಗೂ ವಿದ್ಯಾರ್ಥಿಗಳ ಪ್ರತಿಭೆಯ ಸುಂದರ ಸಂಗಮವಾಗಿ ಮೂಡಿಬಂದಿತು.

Related Articles

Back to top button
error: Content is protected !!