ವಿದ್ಯಾರಣ್ಯ, ಸುಜ್ಞಾನ ಶಿಕ್ಷಣ ಸಂಸ್ಥೆಯ ಅಂಗಳದಲ್ಲಿ ದೀಪಾವಳಿ ಸಂಭ್ರಮ
Views: 23
ಕನ್ನಡ ಕರಾವಳಿ ಸುದ್ದಿ: ಸುಜ್ಞಾನ ಎಜುಕೇಶನಲ್ ಟ್ರಸ್ಟ್ (ರಿ) ಪ್ರವರ್ತಿತ ಯಡಾಡಿ-ಮತ್ಯಾಡಿಯ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ, ಸುಜ್ಞಾನ ಪದವಿ ಪೂರ್ವ ಕಾಲೇಜು ವಿದ್ಯಾರಣ್ಯ ಗ್ಲೋಬಲ್ ಶಾಲಾ ಅಂಗಳದಲ್ಲಿ ನವಂಬರ್ 18ರಂದು ದೀಪಾವಳಿ ಸಂಭ್ರಮ ವಿಜೃಂಭಣೆಯಿಂದ ಆಚರಿಸಲಾಯಿತು.
ಆರಂಭದಲ್ಲಿ ಕೃಷಿಕರು ಗದ್ದೆಗೆ ಹೂ ಹಾಕುವಂತೆ ವಿದ್ಯಾರಣ್ಯ ಅಂಗಳದಲ್ಲಿ ಮೆರವಣಿಗೆಯ ಮೂಲಕ ದೀಪವನ್ನು ಬೆಳಗಿಸಿ ಬಲೀಂದ್ರನನ್ನು ಕರೆಯಲಾಯಿತು.ಮನೆ ಅಂಗಳದಲ್ಲಿ ನೆಟ್ಟ ಮೇಟಿ ಕಂಬಕ್ಕೆ ಪೂಜೆ, ತುಳಸಿ ಪೂಜೆ, ಕೃಷಿ ಉಪಕರಣಗಳಿಗೆ ಪೂಜೆ, ಗೋ ಪೂಜೆಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ನೆರವೇರಿಸಿದರು. ಈ ಸಂದರ್ಭದಲ್ಲಿ ಹಸಿರು ಸಿಡಿಮದ್ದು ಪ್ರದರ್ಶನ ನಡೆಯಿತು.
ಆನಂತರ ನಡೆದ ಸಭಾ ಕಾರ್ಯಕ್ರಮವನ್ನು ಹೊಸನಗರ ಯಡೂರಿನ ಸಂಪನ್ಮೂಲ ವ್ಯಕ್ತಿ ರೇಖಾ ಪ್ರಭಾಕರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಅವರು ಮಾತನಾಡಿ, ಪ್ರೀತಿಯಿಂದ ಬೆಳಗಿದ ದೀಪಾವಳಿ ರೈತ ಕುಟುಂಬದ ದೊಡ್ಡ ಹಬ್ಬದ ಸಂಭ್ರಮ ದೈವಿಕ ಕಳೆಯನ್ನು ಸೃಷ್ಟಿಸಿದ ಬೆಳಕಿನ ಹಬ್ಬವನ್ನು ವಿದ್ಯಾರಣ್ಯ ಅಂಗಳದಲ್ಲಿ ಮರು ಸೃಷ್ಟಿಸಿ ದೀಪಾವಳಿ ಸಂಭ್ರಮವನ್ನು ಕಟ್ಟಿಕೊಡುವ ನಮ್ಮ ಆಚಾರ -ವಿಚಾರ ಸಂಸ್ಕೃತಿ ಮಕ್ಕಳಿಗೆ ದಾಟಿಸುವ ಕೆಲಸ ಆಗಿದೆ. ನಾವು ಚಂದದ ಸಂಸ್ಕೃತಿಯಲ್ಲಿ ಬದುಕುತ್ತಿದ್ದೇವೆ. ನಾವು ಕಾಣದ್ದನ್ನು ಮಕ್ಕಳು ಕಾಣಬೇಕು ಎಂಬ ದೀಪಾವಳಿ ಸಂಭ್ರಮದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ.ರಮೇಶ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯ ಸಂಸ್ಕೃತಿ ಹಬ್ಬ ಹರಿದಿನಗಳ ಮುಖಾಂತರ ಉಳಿಯುವುದರೊಂದಿಗೆ ಮಕ್ಕಳು ಸಹ ಪಾಲಿಸಬೇಕು. ವಿದ್ಯಾರ್ಥಿಗಳಲ್ಲಿ ಒಳ್ಳೆಯ ಮನಸ್ಸು ಕಟ್ಟಬೇಕು ಆ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನು ರೂಪಿಸುವುದೇ ದೀಪಾವಳಿ ಸಂಭ್ರಮದ ಉದ್ದೇಶವಾಗಿದೆ ಎಂದರು.
ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಖಜಾಂಚಿ ಭರತ್ ಶೆಟ್ಟಿ ಸ್ವಾಗತಿಸುತ್ತಾ, ಈ ನೆಲದ ಸಂಸ್ಕೃತಿಯನ್ನು ಎಲ್ಲರಿಗೂ ಪರಿಚಯಿಸಬೇಕು ದೀಪಾವಳಿಯ ಸಂದೇಶ ನೀಡುವ ಮೂಲಕ ಕತ್ತಲೆಯನ್ನು ಹೋಗಲಾಡಿಸಿ ದೀಪ ಬೆಳಗಿಸುವುದರ ಮೂಲಕ ಒಳ್ಳೆಯ ಸಂಸ್ಕೃತಿಯನ್ನು ಬೆಳೆಸಿಕೊಂಡು ಸಮಾಜಕ್ಕೆ ಮಾದರಿ ವ್ಯಕ್ತಿಯನ್ನಾಗಿ ರೂಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಉಪನ್ಯಾಸಕ ರಜತ್ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ವಿವಿಧ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.

















