ಕರಾವಳಿಯಲ್ಲಿ ಭಾರೀ ಗಾಳಿ, ಅಲೆಗಳ ಅಬ್ಬರ: ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ
Views: 109
ಕನ್ನಡ ಕರಾವಳಿ ಸುದ್ದಿ: ಕರ್ನಾಟಕದ ಕರಾವಳಿ ಸೇರಿದಂತೆ ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯ ಹಲವು ಭಾಗಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬಿರುಗಾಳಿ ಮತ್ತು ಅಲೆಗಳ ಅಬ್ಬರ ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ಕುರಿತು ಭಾರತ ಸರ್ಕಾರದ ಗೃಹ ಸಚಿವಾಲಯದ ತುರ್ತು ಪ್ರತಿಕ್ರಿಯೆ ಸಮಗ್ರ ನಿಯಂತ್ರಣ ಕೊಠಡಿಯು (ICR-ER) ರಂದು ವಿಶೇಷ ಎಚ್ಚರಿಕೆ ಪ್ರಕಟಣೆಯನ್ನು ಹೊರಡಿಸಿದೆ.
65 ಕಿ.ಮೀ ವೇಗದ ಬಿರುಗಾಳಿ: ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮೇ 21 ರವರೆಗೆ ಕರ್ನಾಟಕ ಮತ್ತು ಕೇರಳದ ಕರಾವಳಿ ತೀರಗಳು, ಲಕ್ಷದ್ವೀಪ ಹಾಗೂ ಅರಬ್ಬಿ ಸಮುದ್ರದ ದಕ್ಷಿಣ ಪಶ್ಚಿಮ ಭಾಗಗಳಲ್ಲಿ ಭಾರಿ ಗಾಳಿ ಬೀಸಲಿದೆ. ಸಾಮಾನ್ಯವಾಗಿ ಗಾಳಿಯ ವೇಗ ಗಂಟೆಗೆ 40 ರಿಂದ 55 ಕಿಲೋಮೀಟರ್ ಇರಲಿದ್ದು, ಕೆಲವು ಸಂದರ್ಭಗಳಲ್ಲಿ ಇದು ಬರೋಬ್ಬರಿ 65 ಕಿಲೋಮೀಟರ್ ವೇಗವನ್ನು ತಲುಪುವ ಸಾಧ್ಯತೆಯಿದೆ.
ಮೀನುಗಾರರಿಗೆ ಕಟ್ಟುನಿಟ್ಟಿನ ಸೂಚನೆ:ಅರಬ್ಬಿ ಸಮುದ್ರ ಮಾತ್ರವಲ್ಲದೆ, ಶ್ರೀಲಂಕಾ ಕರಾವಳಿ, ಬಂಗಾಳ ಕೊಲ್ಲಿ ಹಾಗೂ ಅಂಡಮಾನ್ ಸಮುದ್ರ ಭಾಗಗಳಲ್ಲೂ ಅಲೆಗಳ ಅಬ್ಬರ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ಕರಾವಳಿ ಭಾಗದ ಮೀನುಗಾರರು ಮತ್ತು ನಿವಾಸಿಗಳು ಹವಾಮಾನ ಇಲಾಖೆಯು ನೀಡುವ ಮುಂದಿನ ಸೂಚನೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಹಾಗೂ ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.






