ಎಚ್.ಡಿ.ದೇವೇಗೌಡ 94ನೇ ವಸಂತಕ್ಕೆ ಪಾದಾರ್ಪಣೆ..ಮತ್ತೊಮ್ಮೆ ರಾಜ್ಯಸಭೆಗೆ?
Views: 10
ಕನ್ನಡ ಕರಾವಳಿ ಸುದ್ದಿ:ರಾಜಕೀಯದಲ್ಲಿ 68 ವರ್ಷ ಕಳೆದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೋಮವಾರ 94ನೇ ವಸಂತಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇದೇ ವೇಳೆ ಎಚ್ ಡಿಡಿ ಮತ್ತೊಮ್ಮೆ ರಾಜ್ಯಸಭೆಗೆ ಪ್ರವೇಶಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪತ್ನಿ ಚೆನ್ನಮ್ಮ ಅವರೊಂದಿಗೆ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಎಚ್‌ಡಿಡಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಈ ವೇಳೆ ಕುಟುಂಬದ ಸದಸ್ಯರು, ಜೆಡಿಎಸ್ ಪಕ್ಷದ ಮುಖಂಡರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು. ಹುಟ್ಟು ಹಬ್ಬದ ಸಂದರ್ಭದಲ್ಲಿ ದೇವೇಗೌಡರಿಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಅಮಿತ್ ಶಾ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ದೇವೇಗೌಡರ ದೀರ್ಘಾವಧಿಯ ರಾಷ್ಟ್ರ ಸೇವೆ, ನೀತಿ ನಿರ್ಣಯಗಳ ಬಗೆಗಿನ ಆಳವಾದ ತಿಳಿವಳಿಕೆ ಹಾಗೂ ಜನಪರ ಕಾಳಜಿಯನ್ನು ಶ್ಲಾಘಿಸಿ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.
ನನಗೆ 93 ವರ್ಷ ಪೂರ್ಣವಾದರೂ ಮನೆಯಲ್ಲೇ ಕುಳಿತುಕೊಳ್ಳುವುದಿಲ್ಲ. ಜನರು ಸಮಸ್ಯೆಯಲ್ಲಿದ್ದಾರೆ. ಅವರ ಪರ ನಾನು ಕೆಲಸ ಮಾಡುತ್ತೇನೆ. ಈ ಹೋರಾಟದಲ್ಲಿ ಯಾವುದೇ ಸವಾಲು ಎದುರಾದರೂ ಎದುರಿಸುತ್ತೇನೆ ಎಂದಿದ್ದಾರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ
ದೇವೇಗೌಡರು ‘ವಯೋ ಸಹಜ ಆರೋಗ್ಯ ಸಮಸ್ಯೆಗಳಿದ್ದರೂ, ವೀಲ್ ಚೇರ್‌ನಲ್ಲೇ ಕುಳಿತು ಸಾರ್ವಜನಿಕರ ಹಿತಕ್ಕಾಗಿ ಹೋರಾಡುವುದನ್ನು ಮುಂದುವರಿಸುವುದಾಗಿ ದೃಢ ಸಂಕಲ್ಪ ವ್ಯಕ್ತಪಡಿಸಿದರು.
ಸಾಧ್ಯವಾದಷ್ಟು ದಿನ ತಮ್ಮ ವೀಲ್‌ಚೇರ್‌ನಲ್ಲೇ ಕುಳಿತು ಜನರ ಹಿತಾಸಕ್ತಿಗಾಗಿ ಹೋರಾಡಲು ಬಯಸುತ್ತೇನೆ ಎಂದು ಹೇಳಿದರು. 2028 ರ ಕರ್ನಾಟಕ ವಿಧಾನಸಭಾ ಚುನಾವಣೆಯ ಬಗ್ಗೆ ಕೇಳಿದಾಗ, ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಎನ್‌ಡಿಎನಲ್ಲಿ ಸಣ್ಣ ಮೈತ್ರಿ ಪಕ್ಷವಾಗಿದೆ. ಬಿಜೆಪಿ ಜೊತೆಗಿನ ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ದಕ್ಷಿಣ ಭಾರತದಲ್ಲಿ ಈಗ ಕೇರಳ, ಕರ್ನಾಟಕ ಮತ್ತು ತೆಲಂಗಾ ಣದಲ್ಲಿ ಕಾಂಗ್ರೆಸ್ ತನ್ನದೇ ಆದ ಸರ್ಕಾರಗಳನ್ನು ಹೊಂದಿದೆ. ಭವಿಷ್ಯದಲ್ಲಿ ಏನಾಗುತ್ತದೆ ಎಂದು ನೋಡೋಣ, ನಾನು ಈಗ ಅದರ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಂತೆ ಪ್ರಾಮಾಣಿಕತೆಯಿಂದ ಪಕ್ಷವನ್ನು ಬಲಪಡಿಸುವತ್ತ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.






