ಯುವಜನ

ಚಿರತೆಯ ದಾಳಿಯಿಂದ ಎದೆಗುಂದದೆ ಧೈರ್ಯದಿಂದ ಹೋರಾಡಿ ಪ್ರಾಣ ಉಳಿಸಿಕೊಂಡ ಬಾಲಕ!

Views: 124

ಕನ್ನಡ ಕರಾವಳಿ ಸುದ್ದಿ: ಮಧ್ಯಪ್ರದೇಶದ ಕುರ್ಸಿ ಗ್ರಾಮದ 13 ವರ್ಷದ ಬಾಲಕ ಸತ್ಯಂ ಠಾಕೂರ್, ತನ್ನ ಮೇಲೆ ದಾಳಿ ಮಾಡಲು ಬಂದ ಚಿರತೆಯನ್ನು ಎದೆಗುಂದದೆ ಎದುರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಮನೆಯ ಸಮೀಪದ ತೋಟದ ಬಾವಿಯ ಬಳಿ ಆಟವಾಡುತ್ತಿದ್ದಾಗ ಪೊದೆಯಿಂದ ನೆಗೆದು ಬಂದ ಚಿರತೆಯು ಆತನ ಮೇಲೆರಗಿತು. ಈ ವೇಳೆ ಸಮಯಪ್ರಜ್ಞೆ ಮೆರೆದ ಸತ್ಯಂ, ಚಿರತೆಯ ಕುತ್ತಿಗೆಯನ್ನು ಬಲವಾಗಿ ಹಿಡಿದುಕೊಳ್ಳುವ ಮೂಲಕ ಧೈರ್ಯದಿಂದ ಹೋರಾಡಿ ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ.

ಚಿರತೆಯ ಬಲಿಷ್ಠ ಉಗುರುಗಳು ತಗುಲಿ ಬಾಲಕನ ಹೊಟ್ಟೆ ಮತ್ತು ಕಾಲುಗಳಿಗೆ ಗಾಯಗಳಾದರೂ, ಆತ ಕಿಂಚಿತ್ತೂ ಎದೆಗುಂದದೆ ಪ್ರತಿಹೋರಾಟ ನಡೆಸಿದನು. ಬಾಲಕನ ಕಿರುಚಾಟ ಕೇಳಿ ಆತನ ತಂದೆ ಮಹೇಂದ್ರ ಸಿಂಗ್ ಠಾಕೂರ್ ಮತ್ತು ಕುಟುಂಬದವರು ತಕ್ಷಣವೇ ಕೈಯಲ್ಲಿ ಕೋಲುಗಳನ್ನು ಹಿಡಿದುಕೊಂಡು ಸ್ಥಳಕ್ಕೆ ಧಾವಿಸಿದರು.

ಕುಟುಂಬಸ್ಥರೆಲ್ಲರೂ ಒಟ್ಟಾಗಿ ಜೋರಾಗಿ ಕೂಗಾಡಿ ಸದ್ದನ್ನು ಮಾಡಿದಾಗ, ಬಾಲಕನೊಂದಿಗೆ ಸಂಘರ್ಷ ನಡೆಸುತ್ತಿದ್ದ ಚಿರತೆಯು ಹೆದರಿ ಕಾಡಿನೊಳಗೆ ಓಡಿಹೋಯಿತು ಎಂದು ಮಹೇಂದ್ರ ಸಿಂಗ್ ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಾಲಕನ ಅಪ್ರತಿಮ ಧೈರ್ಯವನ್ನು ಶ್ಲಾಘಿಸಿದ್ದಾರೆ.ಚಿರತೆ ದಾಳಿಯಿಂದ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಬಾಲಕನ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ,

Related Articles

Back to top button
error: Content is protected !!