ಸಾಮಾಜಿಕ

ಗಂಡನ ಬಿಟ್ಟು ಪ್ರಿಯಕರನ ಜೊತೆ ಓಡಿ ಹೋದ ಮಹಿಳೆಗೆ ವಿಷ ನೀಡಿ ಕೊಂದ ಪೋಷಕರು

Views: 101

ಕನ್ನಡ ಕರಾವಳಿ ಸುದ್ದಿ: ಬೆಳಗಾವಿ ಜಿಲ್ಲೆಯಲ್ಲಿ ಮರ್ಯಾದೆಗೇಡು ಹತ್ಯೆಯೊಂದು ಬೆಳಕಿಗೆ ಬಂದಿದ್ದು, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿಹೋಗಿದ್ದಾಳೆ ಎಂಬ ಕಾರಣಕ್ಕೆ ಯುವತಿಯನ್ನು ಸ್ವಂತ ಕುಟುಂಬದವರೇ ಕೊಲೆ ಮಾಡಿ, ಬಳಿಕ ಸಾಕ್ಷ್ಯ ನಾಶಪಡಿಸಲು ಶವವನ್ನು ಸುಟ್ಟು ಹಾಕಿದ ಅಮಾನವೀಯ ಘಟನೆ ನಡೆದಿದೆ.

ರಾಯಬಾಗ ತಾಲೂಕಿನ ಹಣಬರಟ್ಟಿ ಗ್ರಾಮದ 24 ವರ್ಷದ ಸತ್ಯವ್ವ ಸಂತೋಷ ಹಳವಿ ಕೊಲೆಯಾದ ದುರ್ದೈವಿ.

ಈಕೆ ಈಗಾಗಲೇ ವಿವಾಹಿತೆಯಾಗಿದ್ದರೂ, ಕೃಷ್ಣಾ ಪಾಟೀಲ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇತ್ತೀಚೆಗೆ ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಮನೆ ತೊರೆದು ಹೋಗಿದ್ದಳು ಎನ್ನಲಾಗಿದೆ.

ಇದರಿಂದ ಕುಟುಂಬದ “ಮರ್ಯಾದೆ ಹರಾಜಾಗಿದೆ’ ಎಂಬ ಆಕ್ರೋಶದಿಂದ ಕುಟುಂಬಸ್ಥರು ಆಕೆಯನ್ನು ಹುಡುಕಾಟ ನಡೆಸಿದರು. ಮಾರ್ಚ್ 13ರಂದು ಸತ್ಯವ್ವಳನ್ನು ಪತ್ತೆ ಹಚ್ಚಿದ ನಂತರ, ಆಕೆಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಬಳಿಕ ಯಾರಿಗೂ ಸುಳಿವು ಸಿಗದಂತೆ ಶವವನ್ನು ಸುಟ್ಟು ಹಾಕಲಾಗಿದೆ.

ಈ ಸಂಬಂಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದಾಗ ಈ ದಾರುಣ ಘಟನೆ ಬಯಲಾಗಿದೆ.

ಪ್ರಿಯಕರನಿಂದ ದೂರು

ಸತ್ತೆವ್ವಾ ಸಂಪರ್ಕಕ್ಕೆ ಸಿಗದಿದ್ದಾಗ ಸಂಶಯಗೊಂಡಿದ್ದ ಪ್ರಿಯಕರ ಕೃಷ್ಣಾ ಯಮಕನಮರಡಿ ಠಾಣೆಗೆ ದೂರು ನೀಡಿದ್ದ. ದೂರಿನನ್ವಯ ತನಿಖೆ ಕೈಗೊಂಡಿದ್ದ ಸಿಪಿಐ ಜಾವೇದ್ ಮುಶಾಪುರಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಪ್ಪ ಪ್ರಕಾಶ ಹಳವರ, ಸಹೋದರ ಶಾನೂರ ಹಳವರ ಹಾಗೂ ಭಾವ ಕಲ್ಲಪ್ಪ ಮೊರಬದ ಎಂಬ ಮೂವರನ್ನು ಬಂಧಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಹತ್ಯೆ ಮಹಾರಾಷ್ಟ್ರದ ಮಿರಜ್ ಪ್ರದೇಶದಲ್ಲಿ ನಡೆದಿರುವ ಸಾಧ್ಯತೆ ವ್ಯಕ್ತವಾಗಿದೆ. ಸದ್ಯ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಮರ್ಯಾದೆ ಹೆಸರಿನಲ್ಲಿ ಸ್ವಂತ ಮಗಳನ್ನೇ ಬಲಿ ಪಡೆದ ಈ ಘಟನೆ ಸ್ಥಳೀಯವಾಗಿ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

 

Related Articles

Back to top button
error: Content is protected !!