ಪ್ರೇಮಿಯನ್ನು ಪಡೆಯುವ ಹಠಕ್ಕೆ ಬಿದ್ದ ಯುವತಿ: ಅಜ್ಜನನ್ನು ಜೀವಂತವಾಗಿ ಸುಟ್ಟು, 5 ವರ್ಷದ ಹಸುಗೂಸು ಸಹ ಬಲಿ!
Views: 128
ಕನ್ನಡ ಕರಾವಳಿ ಸುದ್ದಿ: ತನ್ನ ಪ್ರೇಮಿಯನ್ನು ಪಡೆಯುವ ಹಠಕ್ಕೆ ಬಿದ್ದ 20 ವರ್ಷದ ಯುವತಿಯೊಬ್ಬಳು, ಪ್ರೇಮಿಯ ತಾತನನ್ನು ಜೀವಂತವಾಗಿ ಸುಟ್ಟಿದ್ದಾಳೆ. ಅಲ್ಲದೇ 5 ವರ್ಷದ ಹಸುಗೂಸನ್ನೂ ಬಲಿಪಡೆದಿದ್ದಾಳೆ.
ಬಿಹಾರಿನ ಮೋತಿಹಾರಿಯ ಚಿರೈಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಭೀಕರ ಜೋಡಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆರೋಪಿ ಶಿಲ್ಪಿ ಕುಮಾರಿ ಎಂಬಾಕೆಯನ್ನು ಬಂಧಿಸಿದ್ದಾರೆ.
ಪೊಲೀಸ್ ತನಿಖೆಯ ಪ್ರಕಾರ, ಶಿಲ್ಪಿ ಕುಮಾರಿ ಮತ್ತು ಅದೇ ಗ್ರಾಮದ ನಿತೀಶ್ ಕುಮಾರ್ ಎಂಬುವವರ ನಡುವೆ 2024 ರಿಂದ ಪ್ರೇಮ ಸಂಬಂಧವಿತ್ತು. ಇವರ ಸಂಬಂಧಕ್ಕೆ ನಿತೀಶ್ ಅವರ ತಾತ ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದರು. ಇದರಿಂದ ಆಕ್ರೋಶಗೊಂಡ ಶಿಲ್ಪಿ, ತನ್ನ ಪ್ರೇಮ ಸಂಬಂಧಕ್ಕೆ ಅಡ್ಡಿಯಾಗಿದ್ದ ತಾತನನ್ನು ದಾರಿಯಿಂದ ತಪ್ಪಿಸಲು ಸಂಚು ರೂಪಿಸಿದಳು. ಒಂದು ದಿನ ಅವರು ಮಲಗಿದ್ದಾಗ ಬೆಂಕಿ ಹಚ್ಚಿ ಅವರನ್ನು ಜೀವಂತವಾಗಿ ಸುಟ್ಟು ಮುಗಿಸಿದ್ದಾಳೆ.
ಸೇಡಿನ ಕಿಚ್ಚು ಅಲ್ಲಿಗೇ ನಿಲ್ಲಲಿಲ್ಲ ನಿತೀಶ್ನ ಸಂಬಂಧಿ ಮಗು ಅಂಶಿಕಾ (5 ವರ್ಷ) ಎನ್ನುವವಳ ತಾಯಿ ರಾಗಿಣಿ, ನಿತೀಶ್ನನ್ನು ತನ್ನ ವಿರುದ್ಧ ಎತ್ತಿಕಟ್ಟುತ್ತಾಳೆ ಎಂದು ಶಿಲ್ಪ ಅನುಮಾನಿಸಿದ್ದಳು. ಈ ಕಾರಣಕ್ಕೆ ರಾಗಿಣಿಯನ್ನು ಸಿಲುಕಿಸಲು ಆಕೆಯ ಮಗಳನ್ನೇ ಮುಗಿಸಲು ನಿರ್ಧರಿಸಿದ್ದಳು
ಮಾರ್ಚ್ 20 ರಂದು ಮಗು ಅಂಶಿಕಾಳನ್ನು ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ದ ಶಿಲ್ಪಿ, ಮಗುವಿನಿಂದ ತನ್ನ ತಾಯಿಯ ವಿರುದ್ಧ ಕೆಲವು ಮಾತುಗಳನ್ನು ಹೇಳಿಸಿ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಳು. ನಂತರ ಮಗುವಿನ ಕುತ್ತಿಗೆ ಸೀಳಿದ್ದಾಳೆ. ಶವವನ್ನು ಒಂದು ಬಕೆಟ್ನಲ್ಲಿ ಹಾಕಿ ಮನೆಯ ಛಾವಣಿಯ ಮೇಲೆ ಅಡಗಿಸಿಟ್ಟಿದ್ದ ಆಕೆ, ನಂತರ ಕತ್ತಲಲ್ಲಿ ಶವವನ್ನು ಹತ್ತಿರದ ಹೊಲಕ್ಕೆ ಎಸೆದಿದ್ದಳು.
ಮಾರ್ಚ್ 22 ರಂದು ಮಗುವಿನ ಶವ ಪತ್ತೆಯಾದಾಗ ಇಡೀ ಗ್ರಾಮವೇ ಬೆಚ್ಚಿಬಿದ್ದಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಒಂದು ಆಡಿಯೋ ಕ್ಲಿಪ್ ಮತ್ತು ಇಂಟರ್ನೆಟ್ ಡೇಟಾ ಪ್ರಮುಖ ಸುಳಿವು ನೀಡಿತು. ತಾಂತ್ರಿಕ ತನಿಖೆಯ ಆಧಾರದ ಮೇಲೆ ಶಿಲ್ಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆಕೆ ತನ್ನೆಲ್ಲಾ ಕೃತ್ಯಗಳನ್ನು ಒಪ್ಪಿಕೊಂಡಿದ್ದಾಳೆ.






