ಮರಿ ಮೊಮ್ಮಗನ ಜೊತೆ ರೀಲ್ಸ್ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ನಕ್ಕು ನಗಿಸುತ್ತಿದ್ದ ಲಕ್ಷ್ಮೀ ಅಜ್ಜಿ ವಿಧಿವಶ
Views: 197
ಕನ್ನಡ ಕರಾವಳಿ ಸುದ್ದಿ: ತಮ್ಮ 90ನೇ ವಯಸ್ಸಿನಲ್ಲಿ ದೇಶದ ಅತ್ಯಂತ ಹಿರಿಯ ‘ಸೋಶಿಯಲ್ ಮೀಡಿಯಾ ಇನ್ಫ್ಲೂಯನ್ಸರ್’ ಆಗಿ ಇಂಟರ್‌ನೆಟ್‌ನಲ್ಲಿ ಸಖತ್ ಹವಾ ಸೃಷ್ಟಿಸಿದ್ದ ಕರುನಾಡಿನ ಪ್ರೀತಿಯ ಲಕ್ಷ್ಮೀ (ಲಕ್ಷ್ಮೀ ಮಾಸ್ತಪ್ಪ ನಾಯ್ಕ್) ಅಜ್ಜಿ ವಿಧಿವಶರಾಗಿದ್ದಾರೆ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿ ನಿವಾಸಿ, ಜೀ ಕನ್ನಡದ ‘ಡ್ರಾಮಾ ಜ್ಯೂನಿಯರ್ಸ್’ ಖ್ಯಾತಿಯ ಸೂರಜ್ ಆಚಾರಿಯವರ ಮುತ್ತಜ್ಜಿ ಲಕ್ಷ್ಮೀ ಮಾಸ್ತಪ್ಪ ನಾಯ್ಕ್ (92) ಅವರು ವಯೋಸಹಜ ಕಾಯಿಲೆಯಿಂದ ಭಾನುವಾರ ನಿಧನ ಹೊಂದಿದ್ದಾರೆ.
ಮರಿಮೊಮ್ಮಗನ ಜೊತೆ ರೀಲ್ಸ್ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಈ ಅಜ್ಜಿಯ ಅಗಲಿಕೆ ಸೂರಜ್ ಕುಟುಂಬಕ್ಕೆ ಮಾತ್ರವಲ್ಲ, ಲಕ್ಷಾಂತರ ಫಾಲೋವರ್ಸ್‌ಗೂ ದೊಡ್ಡ ಆಘಾತ ನೀಡಿದೆ. ಅಜ್ಜಿಯ ನಿಧನಕ್ಕೆ ಸೋಷಿಯಲ್ ಮೀಡಿಯಾ ಮೂಲಕ ಸಾವಿರಾರು ಅಭಿಮಾನಿಗಳು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.
ಲಕ್ಷ್ಮೀ ಅಜ್ಜಿಯವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದರು. ಸೂರಜ್ ಹೊಸ ರೀಲ್ಸ್ ಹಾಕಿದಾಗ ಅದರಲ್ಲಿ ಅಜ್ಜಿ ಇಲ್ಲದಿದ್ದರೆ, “ನಮ್ಮ ಅಜ್ಜಿ ಯಾಕಿಲ್ಲ?” ಅಂತಾ ಅನೇಕರು ಪ್ರಶ್ನಿಸಿ ಕಾಮೆಂಟ್ ಹಾಕುತ್ತಿದ್ದರು. ಅಷ್ಟರಮಟ್ಟಿಗೆ ಈ ಅಜ್ಜಿಯವರ ಮುಗ್ಧ ನಟನೆ ಕನ್ನಡಿಗರಿಗೆ ಕನೆಕ್ಟ್ ಆಗಿತ್ತು. ಇದೀಗ ಅಜ್ಜಿಯವರ ನಿಧನದ ಸುದ್ದಿ ಕೇಳಿ ಸಾವಿರಾರು ಅಭಿಮಾನಿಗಳಿಗೆ ದೊಡ್ಡ ಶಾಕ್ ಉಂಟಾಗಿದೆ. ಇನ್ಮುಂದೆ ನಾವು ಅಜ್ಜಿಯವರ ಅಭಿನಯವನ್ನು ನೋಡಲು ಸಾಧ್ಯವಾಗಲ್ಲವೆಂದು ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ಇಷ್ಟು ದಿನಗಳ ಕಾಲ ತಮ್ಮ ಅದ್ಭುತ ನಟನೆಯ ಮೂಲಕವೇ ಎಲ್ಲರ ಮುಖದಲ್ಲಿ ನಗು ತರಿಸುತ್ತಿದ್ದ ಅಜ್ಜಿಗೆ ಅನೇಕರು ಕೊನೆಯ ನಮನ ಸಲ್ಲಿಸಿದ್ದಾರೆ.






