ನಾವುಂದ ಕಾರು ಮತ್ತು ಕಂಟೈನರ್ ಅಪಘಾತ: ಅಪ್ಪನ ಉಳಿಸಲು ಹರಕೆ ತೀರಿಸಲು ದೇವಸ್ಥಾನಕ್ಕೆ ಹೋಗ್ತಿದ್ದಾಗ ತಾಯಿ-ಮಗಳು ಬಲಿ
Views: 623
ಕನ್ನಡ ಕರಾವಳಿ ಸುದ್ದಿ:ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ನಾವುಂದ ಎಂಬಲ್ಲಿ ಕಾರು ಮತ್ತು ಕಂಟೈನರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗಳು ಮೃತಪಟ್ಟಿದ್ದಾರೆ. ತಂದೆಯ ಆರೋಗ್ಯ ಸುಧಾರಿಸಲಿ ಎಂದು ಮಗಳು ಹೊತ್ತಿದ್ದ ಹರಕೆಯನ್ನು ತೀರಿಸಲು ದೇವಸ್ಥಾನಕ್ಕೆ ತೆರಳುತ್ತಿದ್ದಾಗ ವಿಧಿಯಾಟ ಬೇರೆಯೇ ಆಗಿತ್ತು.
ದುರ್ಘಟನೆಯ ವಿವರ
ಅಪಘಾತದಲ್ಲಿ ಮಮತಾ ಹಾಗೂ ಆಕೆಯ ಮಗಳು ಧೃತಿಕಾ ಮೃತಪಟ್ಟ ದುರ್ದೈವಿಗಳು. ಇವರು ಕುಟುಂಬದ ಸದಸ್ಯರೊಂದಿಗೆ ಕಾರಿನಲ್ಲಿ ಮುರುಡೇಶ್ವರ ದೇವಸ್ಥಾನಕ್ಕೆ ತೆರಳುತ್ತಿದ್ದರು. ನಾವುಂದದಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಕಂಟೈನರ್ ಲಾರಿಗೆ ಕಾರು ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಚಾಲಕನ ನಿದ್ದೆ ಮಂಪರು ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಗಾಯಾಳುಗಳ ಚೇತರಿಕೆ
ಅಪಘಾತದಲ್ಲಿ ರಾಘು (40), ಜಾಹ್ನವಿ (12), ಚಾರ್ವಿ (10) ಮತ್ತು ಕಿರಣ್ ಎಂಬುವವರು ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ತಂದೆಗಾಗಿ ಹರಕೆ ಹೊತ್ತಿದ್ದ ಮಗಳು:
ಈ ಘಟನೆಯ ಹಿಂದೆ ಮನಕಲಕುವ ಕಥೆಯೊಂದಿದೆ. ಗಾಯಾಳು ಕಿರಣ್ ಅವರ 10 ವರ್ಷದ ಪುತ್ರಿ ಚಾರ್ವಿ, ತನ್ನ ತಂದೆಯ ಆರೋಗ್ಯ ಸರಿಯಾಗಲಿ ಎಂದು ದೇವರಲ್ಲಿ ಹರಕೆ ಹೊತ್ತಿದ್ದಳು. ಮಗಳ ಹರಕೆಯನ್ನು ಪೂರೈಸಲು ಮತ್ತು ದೇವರ ದರ್ಶನ ಪಡೆಯಲು ಸಂಬಂಧಿಕರಾದ ರಘು ಹಾಗೂ ಕಿರಣ್ ಕುಟುಂಬದವರು ದೇವಸ್ಥಾನಗಳ ಪ್ರವಾಸ ಹಮ್ಮಿಕೊಂಡಿದ್ದರು.
ಕುಟುಂಬದವರು ಮೊದಲು ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಬಳಿಕ ತ್ರಾಸಿ ಬೀಚ್‌ನಲ್ಲಿ ಸ್ವಲ್ಪ ಸಮಯ ಕಳೆದು, ಅಲ್ಲಿಂದ ಮುರುಡೇಶ್ವರ ದೇವಸ್ಥಾನದತ್ತ ಪ್ರಯಾಣ ಬೆಳೆಸಿದ್ದರು. ಆದರೆ ನಾವುಂದ ತಲುಪುತ್ತಿದ್ದಂತೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಿದ್ದ ಕಂಟೈನರ್‌ಗೆ ಡಿಕ್ಕಿ ಹೊಡೆದಿದೆ. ತಂದೆಯ ಜೀವ ಉಳಿಯಲಿ ಎಂದು ಹರಕೆ ಹೊತ್ತು ಹೊರಟಿದ್ದ ಮಗಳ ಕಣ್ಣೆದುರೇ ತಾಯಿ ಮತ್ತು ಅಕ್ಕ ಪ್ರಾಣ ಕಳೆದುಕೊಂಡಿರುವುದು ಸ್ಥಳೀಯರಲ್ಲಿ ಕಣ್ಣೀರು ತರಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.






