ಸ್ಟಂಟ್ ಮತ್ತು ಕ್ರ್ಯಾಶ್ ರೀಲ್ಸ್ ಮಾಡುತ್ತಿದ್ದಾಗ ಬಿಜೆಪಿ ಮುಖಂಡನ ಪುತ್ರ 9ನೇ ತರಗತಿ ವಿದ್ಯಾರ್ಥಿ ದಾರುಣ ಸಾವು!
Views: 176
ಕನ್ನಡ ಕರಾವಳಿ ಸುದ್ದಿ: ರೀಲ್ಸ್ ಹುಚ್ಚಾಟಕ್ಕೆ ಬಾಲಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ. ಸ್ಟಂಟ್ ಮತ್ತು ಕ್ರ್ಯಾಶ್ ರೀಲ್ಸ್ ಮಾಡುತ್ತಿದ್ದಾಗ ಅಪಘಾತ ಸಂಭವಿಸಿ ಬಿಜೆಪಿ ಮುಖಂಡನ ಪುತ್ರ ಸಾವನ್ನಪ್ಪಿದ್ದಾನೆ. ಬಿಜೆಪಿ ಮುಖಂಡ ವೀರೇಶ ಸಂಗಳದ ಅವರ ಪುತ್ರ ನಮೀಷ್ ಸಂಗಳದ (15) ಮೃತಪಟ್ಟ ಬಾಲಕ.
ರೀಲ್ ಮಾಡಲು ಅತಿ ವೇಗದಲ್ಲಿ ಬೈಕ್ ಮತ್ತು ಐಷಾರಾಮಿ ಕಾರು ಚಲಾಯಿಸುವಾಗ ಅಪಘಾತ ಸಂಭವಿಸಿದ್ದು, ಬಿಜೆಪಿ ಮುಖಂಡನ ಪುತ್ರ ದುರಂತ ಸಾವು ಕಂಡಿದ್ದಾನೆ. ಬೈಕ್ ಮತ್ತು ಆಡಿ ಕಾರು ಸವಾರಿ ಮಾಡುತ್ತಿರುವ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಅಪಘಾತ ಸಂಭವಿಸಿದೆ.
ಘಟನೆಯ ಹಿನ್ನೆಲೆ: ಮೈಸೂರಿನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ನಮೀಷ್ ಯುಗಾದಿ ರಜೆಗಾಗಿ ಹುಬ್ಬಳ್ಳಿಯ ಮನೆಗೆ ಮರಳಿದ್ದರು. ಗುರುವಾರ 15 ವರ್ಷದ ಬಾಲಕ ರೀಲ್ಸ್ ಚಿತ್ರೀಕರಣಕ್ಕಾಗಿ ತನ್ನ ಸ್ನೇಹಿತರೊಂದಿಗೆ ಶೇಜಾವಾಡಕರ್ ಪ್ಲಾಟ್ಗೆ ತೆರಳಿದ್ದ. ಸ್ಟಂಟ್ ಚಿತ್ರೀಕರಣ ಮಾಡಿ ಹೈಸ್ಪೀಡ್ ಬೈಕ್ ಮತ್ತು ಆಡಿ ಕಾರನ್ನು ಬಳಸಿ ಅಪಘಾತಕ್ಕೀಡು ಮಾಡುವುದು ಯೋಜನೆಯಾಗಿತ್ತು. ಅಪಘಾತಕ್ಕೆ ಕಾರಣವಾದ ಆಡಿ ಕಾರನ್ನು ಮತ್ತೊಬ್ಬ 15 ವರ್ಷದ ಬಾಲಕ ಚಲಾಯಿಸುತ್ತಿದ್ದನು. ರೀಲ್‌ಗಳನ್ನು ಚಿತ್ರೀಕರಿಸುತ್ತಿರುವಾಗ, ವೇಗವಾಗಿ ಬಂದ ಕಾರು ನಮೀಷ್ ಸವಾರಿ ಮಾಡುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮವಾಗಿ ನಮೀಷ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮಾಹಿತಿ ಪಡೆದ ಹುಬ್ಬಳ್ಳಿ – ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಕಾರಣನಾದ ಬಾಲಕನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯು ಮನವಿ ಮಾಡುತ್ತಿದೆ. ಬಾಲಕರಿಗೆ ಗಾಡಿಯನ್ನು ಕೊಡಬೇಡಿ. ಈ ಮಕ್ಕಳು ರೀಲ್ಸ್ಗಾಗಿ ಮಾಡಿದ್ದು ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅಪ್ರಾಪ್ತ ಮಕ್ಕಳು ಪಾದಚಾರಿಗಳ ಮೇಲೆ ಹರಿಸಿ ಅಮಾಯಕರನ್ನು ಬಲಿ ತೆಗೆದುಕೊಳ್ಳುವ ಕೆಲಸವಾಗುತ್ತಿದೆ. ವಾಹನಗಳನ್ನು ಮಕ್ಕಳಿಗೆ ಕೊಟ್ಟವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಈ ಪ್ರಕರಣದಲ್ಲಿ ಬಾಲಕನ ಪೋಷಕರ ದೂರಿನ ಆಧಾರದ ಮೇಲೆ ಕ್ರಮಕೈಗೊಳ್ಳುವುದಾಗಿ ಕಮಿಷನರ್ ತಿಳಿಸಿದ್ದಾರೆ.






