ಇತರೆ

ರೀಲ್ಸ್ ಹುಚ್ಚಿಗೆ ಚೀಲಕ್ಕೆ ತುಂಬಿ ಕೊರಿಯರ್ ಮಾಡಲು ಬಂದ ಯುವತಿ…ಪ್ಯಾಕೇಜ್ ಓಪನ್ ಮಾಡಿದಾಗ ಬೆಚ್ಚಿಬಿದ್ದರು! 

Views: 173

ಕನ್ನಡ ಕರಾವಳಿ ಸುದ್ದಿ: ರೀಲ್ಸ್ ಮಾಡುವ ಚಟಕ್ಕೆ ವೃದ್ಧ ವ್ಯಕ್ತಿಯನ್ನು ಚೀಲದಲ್ಲಿ ಹಾಕಿ ಕೂರಿಯರ್ ಮಾಡಲು ಕುಟುಂಬವೊಂದು ಯತ್ನಿಸಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಬೇಕೆಂಬ ಹುಚ್ಚು ಈ ಮಟ್ಟಕ್ಕೂ ಹೋಗಬಹುದಾ ಎಂಬ ಪ್ರಶ್ನೆಯನ್ನೀಗ ಈ ಘಟನೆ ಹುಟ್ಟುಹಾಕಿದೆ.

ಮಹಿಳೆ, ಆಕೆಯ ಪತಿ, ಅತ್ತೆ ಹಾಗೂ ಮಾವ ಸೇರಿ ಐವರು ಮಂಗಳವಾರ ವ್ಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕೂರಿಯರ್ ಕಚೇರಿಗೆ ದೊಡ್ಡ ಪ್ಯಾಕೇಜ್‌ ಅನ್ನು ಹೊತ್ತು ತಂದಿದ್ದಾರೆ. ಇಷ್ಟು ದೊಡ್ಡ ಚೀಲ ನೋಡಿ ಒಳಗೆ ಏನಿದೆ ಎಂದು ಸಿಬ್ಬಂದಿ ಪ್ರಶ್ನಿಸಿದ್ದು, ಈ ವೇಳೆ ಕುಟುಂಬದವರಿಂದ ಯಾವುದೇ ಉತ್ತರ ಬಂದಿಲ್ಲ. ಇದರಿಂದ ಅನುಮಾನಗೊಂಡ ಸಿಬ್ಬಂದಿ ಪ್ಯಾಕೇಜ್ ಓಪನ್ ಮಾಡಿ ನೋಡಿದ್ದಾರೆ. ಆ ವೇಳೆ ಅರೆಕ್ಷಣ ಅವರು ಬೆಚ್ಚಿಬಿದ್ದಿದ್ದು, ವೃದ್ಧ ವ್ಯಕ್ತಿಯೋರ್ವರು ಚೀಲದಲ್ಲಿ ಇರೋದು ಗೊತ್ತಾಗಿದೆ. ಆತ ಕೊರಿಯರ್ ಮಾಡಲು ಬಂದಿದ್ದ ಕುಟುಂಬದ ಪೈಕಿ ಮಹಿಳೆಯ ತಂದೆ ಎಂಬುದು ತಿಳಿದುಬಂದಿದೆ. ಅವರು ಚೀಲದಲ್ಲಿ ಉಸಿರಾಡಲೂ ಕಷ್ಟ ಪಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಹೀಗಿದ್ದರೂ ಕುಟುಂಬದವರು ಮಾತ್ರ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಯುಗಾದಿ ಮತ್ತು ರಂಜಾನ್ ಹಬ್ಬದ ಸಮಯದಲ್ಲಿ ಬಸ್ ಟಿಕೆಟ್‌ಗಳು ಸಿಗದ ಸಮಸ್ಯೆಯನ್ನು ತೋರಿಸಲು, ಮನುಷ್ಯನನ್ನೇ ಕೂರಿಯರ್ ಮಾಡುವ ಪರಿಸ್ಥಿತಿ ಬಂದಿದೆ ಎಂಬ ಸಂದೇಶದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಲು ಈ ರೀತಿ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಇವರ ಹುಚ್ಚಾಟದ ಬಗ್ಗೆ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದರೂ, ಇಷ್ಟು ದೂರ ಬಂದು ಇಷ್ಟು ಕಷ್ಟಪಟ್ಟಿದ್ದೇವೆ. ದಯವಿಟ್ಟು ಪಾರ್ಸೆಲ್ ತೆಗೆದುಕೊಳ್ಳಿ ಎಂದು ಮತ್ತೆ ಮೊಂಡುತನ ಪ್ರದರ್ಶಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಂದ ಖಾಕಿ, ಕುಟುಂಬಸ್ಥರನ್ನು ಠಾಣೆಗೆ ಕರೆದೊಯ್ದಿದೆ. ತಮ್ಮದು ತಪ್ಪಾಯ್ತು ಎಂದು ಕುಟುಂಬಸ್ಥರು ಕ್ಷಮೆಯಾಚನೆ ಮಾಡಿದ ವಿಡಿಯೋ ದಾಖಲಿಸಿಕೊಂಡ ಪೊಲೀಸರು, ಗಂಭೀರ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

Related Articles

Back to top button
error: Content is protected !!