ಅಪ್ರಾಪ್ತ ಯುವತಿ ವಿವಾಹ: ಗರ್ಭಿಣಿಯಾಗಲು ಕಾರಣನಾದ ಪತಿ ಪೋಕ್ಸೋ ಕಾಯ್ದೆಯಡಿ ಬಂಧನ
Views: 58
ಕನ್ನಡ ಕರಾವಳಿ ಸುದ್ದಿ: ಅಪ್ರಾಪ್ತ ಯುವತಿಯನ್ನು ವಿವಾಹವಾಗಿ ಆಕೆ ಗರ್ಭಿಣಿಯಾಗಲು ಕಾರಣನಾದ ಆರೋಪದ ಮೇಲೆ ಜಾರ್ಖಂಡ್ ಮೂಲದ ವ್ಯಕ್ತಿಯೊಬ್ಬನನ್ನು ಬೆಳ್ಳಾರೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.
ಏನಿದು ಘಟನೆ: ಜಾರ್ಖಂಡ್ ಮೂಲದ ಈ ದಂಪತಿ ಉದ್ಯೋಗ ಅರಸಿ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದು, ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ತೋಟದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಯುವತಿ ವೈದ್ಯಕೀಯ ತಪಾಸಣೆಗೆ ಒಳಗಾದ ಸಂದರ್ಭದಲ್ಲಿ. ಆಕೆಯ ವಯಸ್ಸು ಇನ್ನೂ 18 ವರ್ಷ ತುಂಬಿಲ್ಲ ಎಂಬ ವಿಷಯ ವೈದ್ಯಕೀಯ ದಾಖಲೆಗಳಿಂದ ದೃಢಪಟ್ಟಿದೆ.
ಕಾನೂನು ಕ್ರಮ :ಭಾರತೀಯ ಕಾನೂನಿನ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರೊಂದಿಗೆ ದೈಹಿಕ ಸಂಬಂಧ ಹೊಂದುವುದು ಅಥವಾ ವಿವಾಹವಾಗುವುದು ಗಂಭೀರ ಅಪರಾಧವಾಗಿದೆ. ಪೋಕೋ ಕಾಯ್ದೆ-2012ರ ಅಡಿಯಲ್ಲಿ ಅಪ್ರಾಪ್ತರು ನೀಡುವ ಒಪ್ಪಿಗೆಗೆ ಕಾನೂನಿನಲ್ಲಿ ಮಾನ್ಯತೆ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ. ಯುವತಿ ತನ್ನ ಪತ್ನಿಯೇ ಆಗಿದ್ದರೂ ಸಹ, ಆಕೆ ಅಪ್ರಾಪ್ತೆಯಾಗಿರುವುದರಿಂದ ಆರೋಪಿಯ ವಿರುದ್ಧ ಪೋಕೋ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.
ನ್ಯಾಯಾಂಗ ಬಂಧನ: ಬಂಧಿತ ಆರೋಪಿಯನ್ನು ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಬೆಳ್ಳಾರೆ ಪೊಲೀಸರು ಈ ಕುರಿತು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.






