ಇನ್ಸ್ಟಾಗ್ರಾಮ್ನಲ್ಲಿ ಯುವಕನೊಂದಿಗೆ ಪ್ರೀತಿ: ವಿರೋಧಿಸಿದ ಹೆತ್ತವರಿಗೆ ನಿದ್ರೆ ಇಂಜೆಕ್ಷನ್ ನೀಡಿ ಮುಗಿಸಿಬಿಟ್ಟ ನರ್ಸ್!
Views: 86
ಕನ್ನಡ ಕರಾವಳಿ ಸುದ್ದಿ: ಇನ್ಸ್ಟಾಗ್ರಾಮ್ ಪ್ರೇಮಿಗಾಗಿ ಹೆತ್ತವರನ್ನೇ ನರ್ಸ್ ನಿದ್ರೆ ಇಂಜೆಕ್ಷನ್ ನೀಡಿ ಕೊಂದ ಘಟನೆ ವಿಕಾರಾಬಾದ್ ಜಿಲ್ಲೆಯ ಬಂಟ್ವಾರಂ ಮಂಡಲದ ಯಾಚಾರಂ ಗ್ರಾಮದಲ್ಲಿ ನಡೆದಿದೆ.
ನಕ್ಕಲ ಸುರೇಖಾ(25) ಆರೋಪಿ ಮಗಳು, ಲಕ್ಷ್ಮೀ(54) ಮತ್ತು ದಶರತ್(58) ಮೃತಪಟ್ಟವರು.
ಸುರೇಖಾ, ಸಂಗರೆಡ್ಡಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಇಂಜೆಕ್ಷನ್ ಮತ್ತು ಅದನ್ನು ನೀಡುವ ಜ್ಞಾನವನ್ನು ಹೊಂದಿದ್ದಳು. ಕಳೆದ ಎರಡು ವರ್ಷಗಳಿಂದ ಈಕೆ ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ಯುವಕನೊಂದಿಗೆ ಪ್ರೀತಿಯಲ್ಲಿದ್ದಳು. ಆತ ಬೇರೆ ಜಾತಿಗೆ ಸೇರಿದವನೆಂಬ ಕಾರಣಕ್ಕೆ ಪೋಷಕರು ಈ ವಿವಾಹಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರು.
ಇದರಿಂದ ಕೋಪಗೊಂಡ ಸುರೇಖಾ ಜನವರಿ 24ರಂದು ತಾನು ಕೆಲಸ ಮಾಡುತ್ತಿದ್ದ ನರ್ಸಿಂಗ್ ಹೋಮ್ನಿಂದ ನಿದ್ರೆ ಮಾತ್ರೆಗಳನ್ನು ತರಿಸಿದ್ದಲ್ಲದೇ, ಅನುಮಾನ ಬಾರದಂತೆ ಮೈ-ಕೈ ನೋವಿಗೆ ಔಷಧಿ ಎಂದು ಸುಳ್ಳು ಹೇಳಿ, ತನ್ನ ಹೆತ್ತವರಿಗೆ ಅಧಿಕ ಪ್ರಮಾಣದ ಇಂಜೆಕ್ಷನ್ ನೀಡಿದ್ದಳು. ಇದರಿಂದಾಗಿ ಅವರಿಬ್ಬರು ಪ್ರಜ್ಞೆ ಕಳೆದುಕೊಂಡರು. ಸಹೋದರನಿಗೆ ಮಾಹಿತಿ ತಿಳಿಸಿದ ನಂತರ ಇಬ್ಬರೂ ತಂದೆ-ತಾಯಿಯರನ್ನು ಆಸ್ಪತ್ರೆಗೆ ಕರೆದೊಯ್ದರು, ಆದರೆ ವೈದ್ಯರು ಅವರು ಬರುವಷ್ಟರಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರ ತನಿಖೆಯಿಂದ ಈ ಸಾವಿನಲ್ಲಿ ಸುರೇಖಾಳ ಪಾತ್ರ ಇರುವುದು ಬೆಳಕಿಗೆ ಬಂದಿದೆ. ಕೃತ್ಯಕ್ಕೆ ಬಳಸಿದ ಸಿರಿಂಜ್ಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳು ಪತ್ತೆಯಾಗಿತ್ತು. ವಿಚಾರಣೆ ವೇಳೆ ಸುರೇಖಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಪೊಲೀಸರು ಆಕೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.






